ನವದೆಹಲಿ: ಭಾರತದ ಉದಯೋನ್ಮುಖ ಕ್ರಿಕೆಟಿಗ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯೊಂದನ್ನು ನಿರ್ಮಿಸಿದ್ದು, ಭಾರತದ ಪರ ಐಪಿಎಲ್ ಪಂದ್ಯವೊಂದರಲ್ಲಿ ಆತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲೇ ರಿಷಬ್ ಪಂತ್ ಇನ್ನಿಂಗ್ಸ್ ವೊಂದರಲ್ಲಿ ಗರಿಷ್ಟ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಲ್ಲದೆ ಐಪಿಎಲ್ ನ 50 ನೇ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅಲ್ಲದೆ ಪಂತ್ ಐಪಿಎಲ್ ನಲ್ಲಿ ಶತಕ ಗಳಿಸಿದ 31ನೇ ಆಟಗಾರ ಹಾಗೂ ಭಾರತದ 13ನೇ ಆಟಗಾರ ಎನಿಸಿಕೊಂಡರು. ಅಂತೆಯೇ ಹಾಲಿ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಮತ್ತು ಐಪಿಎಲ್ ನಲ್ಲಿ ಆತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ರಿಷಬ್ ಪಾತ್ರರಾದರು.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ 15 ಬೌಂಡರಿ, 7 ಭರ್ಜರಿ ಸಿಕ್ಸರ್ ನ್ನೊಳಗೊಂಡಂತೆ ಕೇವಲ 63 ಎಸೆತಗಳಲ್ಲಿ 128 ರನ್ ಸಿಡಿಸಿ ಅಜೇಯರಾಗಿ ಉಳಿದರು. ಪ್ರಮುಖವಾಗಿ ಇನ್ನಿಂಗ್ಸ್ ನ ಅಂತಿಮ ಓವರ್ ನಲ್ಲಿ ಪಂತ್ ಬರೊಬ್ಬರಿ 26 ರನ್ ಸಿಡಿಸಿದರು. ರಿಷಬ್ ಶತಕದ ಹೊರತಾಗಿಯೂ ಹೈದರಾಬಾದ್ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯಿತು.
ಇನ್ನು ಭಾರತೀಯ ಆಟಗಾರರ ಪೈಕಿ ಕಿಂಗ್ಸ್ ಇಲೆವನ್ ಪಂಜಾಬ್ ನ ಮುರಳಿ ವಿಜಯ್ 127 ರನ್ ಗಳಿಸಿದ್ದರೆ, ಈ ಹಿಂದೆ ಪಂಜಾಬ್ ಪರ ಆಡಿದ್ದ ಸೆಹ್ವಾಗ್ 122 ರನ್ ಸಿಡಿಸಿ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಶತಕ ಸಿಡಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿರುವ ಪಂತ್ ಈ ಶತಕದ ಮೂಲಕ 1 ಸಾವಿರ ರನ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಮನೀಶ್ ಪಾಂಡೆ ಆರ್‌ಸಿಬಿ ಪರ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಈ ಟೂರ್ನಿಯ 11 ಪಂದ್ಯಗಳಲ್ಲಿ 521 ರನ್ ಗಳಿಸಿರುವ ಪಂತ್ ಪಂಜಾಬ್ ತಂಡದ ಕೆಎಲ್ ರಾಹುಲ್ ಜೊತೆ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
2013ರಲ್ಲಿ ಕ್ರಿಸ್ ಗೇಯ್ಲ್ ಪುಣೆ ತಂಡದ ವಿರುದ್ದ ಸಿಡಿಸಿದ್ದ 30 ಎಸೆತಗಳ ಶತಕ ಇಂದಿಗೂ ವೇಗದ ಶತಕವಾಗಿ ಉಳಿದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics