ನವದೆಹಲಿ: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಗೆ ಟ್ವೀಟಿಗರು ತೀವ್ರ ತರಾಟೆ ತೆಗೆದುಕೊಂಡಿದ್ದು, ಭಾರತ ತಂಡದ ಸವ್ಯಸಾಚಿ ಆಟಗಾರ ರಾಹುಲ್ ದ್ರಾವಿಡ್ ಅವರ ಹಳೆಯದೊಂದು ವಿಡಿಯೋ ಮೂಲಕ ಕ್ರಿಕೆಟಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಯುವತಿಯರೊಂದಿಗಿನ ತಮ್ಮ ಪೋಲಿತನವನ್ನು ಹಂಚಿಕೊಂಡಿದ್ದರು. ಕ್ರಿಕೆಟಿಗರ ಈ ನಡೆ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ ಬಿಸಿಸಿಐಗೂ ಅಸಮಾಧಾನ ತರಿಸಿದೆ. ಇದೇ ಕಾರಣಕ್ಕೆ ಬಿಸಿಸಿಐ ಈ ಇಬ್ಬರೂ ಆಟಗಾರರ ಮೇಲೆ ನಿಷೇಧ ಶಿಕ್ಷೆ ಹೇರುವ ಕುರಿತು ಚಂತನೆಯಲ್ಲಿ ತೊಡಗಿದೆ.
ಇನ್ನು ಈ ಇಬ್ಬರೂ ಆಟಗಾರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೆಲ ಕ್ರಿಕೆಟಿಗರು ಹಿರಿಯ ಕ್ರಿಕೆಟಿಗರಿಂದ ಇವರು ಕಲಿಯ ಹೇಕಿರುವುದು ಸಾಕಷ್ಟಿದೆ. ಹಣ ಮತ್ತು ಶೋಕಿಯೇ ಜೀವನವಲ್ಲ. ಜೀವನದಲ್ಲಿ ಕೆಲ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು. ಅವಕಾಶ ಸಿಕ್ಕರೆ ದುರುಪಯೋಗ ಪಡಿಸಿಕೊಳ್ಳುವ ಕ್ರಿಕೆಟಿಗರ ನಡುವೆ ರಾಹುಲ್ ದ್ರಾವಿಡ್ ರಂತಹ ಸವ್ಯಸಾಚಿ ಆಟಗಾರರನ್ನು ನೋಡಿ ಈಗಿನ ತಲೆಮಾರಿನ ಕ್ರಿಕೆಟಿಗರು ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲದೆ ಈ ಹಿಂದೆ ರಾಹುಲ್ ದ್ರಾವಿಡ್ ಅವರನ್ನು ಬಕ್ರಾ ಮಾಡುವ ನಿಟ್ಟಿನಲ್ಲಿ ಯುವತಿಯೊಬ್ಬಳು ಮಾಡಿದ್ದ ಲವ್ ಪ್ರಪೋಲ್ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ದ್ರಾವಿಡ್ ಸಂದರ್ಶನಕ್ಕೆ ಬರುವ ಯುವತಿ ಬಳಿಕ ಅವರಿಗೆ ತನ್ನ ಪ್ರೇಮ ನಿವೇದನೆ ಮಾಡುತ್ತಾಳೆ. ಇದರಿಂದ ತಬ್ಬಿಬಾದ ದ್ರಾವಿಡ್ ಅಲ್ಲಿಂದ ಹೋಗಲು ಯತ್ನಿಸುತ್ತಾರೆ. ಆದರೆ ಯುವತಿ ಮತ್ತು ಆಕೆಯ ತಂದೆ ಅದಕ್ಕೆ ಅವಕಾಶ ನೀಡುವುದಿಲ್ಲ. ಬಹಳಿಕ ಸಾವರಿಸಿಕೊಂಡ ದ್ರಾವಿಡ್ ಯುವತಿಯ ವಯಸ್ಸು ಕೇಳಿ ಈ ವಯಸ್ಸಲ್ಲಿ ಪ್ರೀತಿ ಪ್ರೇಮವನ್ನೆಲ್ಲಾ ಪಕ್ಕಕ್ಕಿಟ್ಟು, ನಿನ್ನ ವಿದ್ಯಾಭ್ಯಾಸದ ಮೇಲೆ ಗಮನ ಹರಿಸು ಎಂದು ಬುದ್ದಿ ಮಾತು ಹೇಳುತ್ತಾರೆ.
ಅವಕಾಶ ಸಿಕ್ಕರೆ 'ಕರ್ಕೆ ಆಯಾ' ( ಮಾಡಿ ಬಂದೆ) ಎನ್ನುವ ಪಾಂಡ್ಯಾಗಿಂತ ಅವಕಾಶ ಸಿಕ್ಕರೂ ಬುದ್ದಿಮಾತು ಹೇಳಿ ಕಳುಹಿಸಿದ ದ್ರಾವಿಡ್ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿಯಾಗುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics