ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಇಂಗ್ಲೆಂಡ್ ತಂಡ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಐಸಿಸಿ 2019 ಏಕದಿನ ವಿಶ್ವಕಪ್ ನಲ್ಲಿ ರಿವರ್ ಸೈಡ್ ಗ್ರೌಂಡ್ ನಲ್ಲಿ ಬುಧವಾರ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 119 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ಆ ಮೂಲಕ ಲೀಗ್ ಹಂತದ ಎಲ್ಲ 9 ಪಂದ್ಯಗಳನ್ನು ಪೂರ್ಣಗೊಳಿಸಿರುವ ಇಂಗ್ಲೆಂಡ್ ತಂಡ ಆರು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ ಒಟ್ಟು 12 ಅಂಕಗಳನ್ನು ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ನೆಗೆದಿದೆ. ಅಲ್ಲದೆ ಆಸ್ಟ್ರೇಲಿಯಾ, ಭಾರತ ಬಳಿಕ ಸೆಮೀಸ್ ಗೆ ಲಗ್ಗೆಯಿಟ್ಟ ಮೂರನೇ ತಂಡವೆನಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಜಾನಿ ಬೇರ್ ಸ್ಟೋವ್ ಅವರ ಶತಕ, ಜೇಸನ್ ರಾಯ್ ಅವರ ಅರ್ಧಶತಕದ ನೆರವಿನ ಮೂಲಕ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತು. ಗೆಲ್ಲಲು 306 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ನ್ಯೂಜಿಲೆಂಡ್ ಪರ ಟಾಮ್ ಲಾಥಮ್ (57ರನ್) ಅವರನ್ನು ಹೊರತು ಪಡಿಸಿದರೆ ಮತ್ತಾವ ಬ್ಯಾಟ್ಸ್ ಮನ್ ಗಳೂ ಗಟ್ಟಿಯಾಗಿ ನಿಂತು ರನ್ ಗಳಿಸಲಿಲ್ಲ. ಕೇವಲ 45 ಓವರ್ ಗಳಲ್ಲಿಯೇ ನ್ಯೂಜಿಲೆಂಡ್ ತಂಡ ಕೇವಲ 186ರನ್ ಗಳಿಗೆ ಆಲೌಟ್ ಆಯಿತು.
ಆ ಮೂಲಕ ನಿರ್ಣಾಯಕ ಪಂದ್ಯದಲ್ಲಿ 119 ರನ್ ಗಳ ಹೀನಾಯ ಸೋಲುಕಂಡಿತು. ಇಂಗ್ಲೆಂಡ್ ಪರ ಮಾರ್ಕ್ ವುಡ್ 3 ವಿಕೆಟ್ ಕಬಳಿಸಿದರೆ, ಅಂದಿಲ್ ರಶೀದ್, ಬೆನ್ ಸ್ಟೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್ ಮತ್ತು ಕ್ರಿಸ್ ವೋಕ್ಸ್ ತಲಾ 1 ವಿಕೆಟ್ ಕಬಳಿಸಿದರು. ಈ ಪಂದ್ಯದ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಖಚಿತ ಪಡಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics