ಕ್ರಿಕೆಟ್

ಅಶೋಕ್‌ ದಿಂಡಾ ವಿರುದ್ಧ ಟ್ರೋಲ್‌ಗೆ ದಿಟ್ಟ ಉತ್ತರ ಕೊಟ್ಟ ಆರ್‌ಸಿಬಿ ವೇಗಿ ಇಸುರು ಉದನಾ

Vishwanath S

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಶುರುವಾಗುತ್ತಿದ್ದಂತೆಯೇ ಸೋಷಿಯಲ್‌ ಮೀಡಿಯಾಗಳ ಟ್ರೋಲ್‌ ಪೇಜ್‌ಗಳಲ್ಲಿ ಒಂದು ಸಂಗತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ ಯಾವುದೇ ಬೌಲರ್‌ ಅತಿ ಹೆಚ್ಚು ರನ್‌ ನೀಡಿದರೆ ಆತ ತರಬೇತಿ ಪಡೆದಿರುವುದು ಅಶೋಕ್‌ ದಿಂಡಾ ಅವರ ಶಾಲೆಯಲ್ಲಿ ಎಂಬುದು.

ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಸಹರಾ ಪುಣೆ ವಾರಿಯರ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌, ಸೈಸಿಂಗ್‌ ಪುಣೆ ಸೂಪರ್ ಜಯಂಟ್ಸ್‌  ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ಪರ ಆಡಿದ ಬಂಗಾಳದ ಅನುಭವಿ ವೇಗಿ ಅಶೋಕ್‌ ದಿಂಡಾ ಐಪಿಎಲ್‌ 2020 ಟೂರ್ನಿಯಲ್ಲಿ ಆಡುತ್ತಿಲ್ಲ. ಅಂದಹಾಗೆ ಕಳೆದ ಎರಡು ಮೂರು ಆವೃತ್ತಿಗಳಲ್ಲಿ ಅವರನ್ನು ಯಾವುದೇ ಫ್ರಾಂಚೈಸಿ ತಂಡ ಖರೀದಿಸಲು ಮುಂದಾಗಿಲ್ಲ.

ಆದರೆ, ಸೋಷಿಯಲ್‌ ಮೀಡಿಯಾ ಟ್ರೋಲ್‌ಗಳಲ್ಲಿ ದಿಂಡಾ ಅವರನ್ನು ಆಗಾಗ ಉಲ್ಲೇಖಿಸಿ ಅವರ ಬೌಲಿಂಗ್‌ ಪ್ರದರ್ಶನವನ್ನು ಅಣಕವಾಡುವುದು ಮುಂದುವರಿದಿದೆ. ಇದೀಗ ಬಂಗಾಳದ ವೇಗಿಯ ಬೆಂಬಲಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನೂತನ ಬೌಲರ್‌ ಎಡಗೈ ಮಧ್ಯಮ ವೇಗಿ ಇಸುರು ಉದನಾ ನಿಂತಿದ್ದಾರೆ.

36 ವರ್ಷದ ಅನುಭವಿ ಬಲಗೈ ವೇಗಿ ದಿಂಡಾ ವೃತ್ತಿ ಪರ ಕ್ರಿಕೆಟ್‌ಗೆ ಕಾಲಿಡುವ ಮೊದಲು ಅವರು ಸಾಗಿಬಂದ ಕಷ್ಟದ ಹಾದಿ ಬಗ್ಗೆ ಹೇಳಿಕೊಂಡಿರುವ ಸಂದರ್ಶನದ ಸ್ಕ್ರೀನ್‌ ಶಾಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿರುವ ಉದನಾ, ಟ್ರೋಲ್‌ ಪೇಜ್‌ಗಳ ಹಾವಳಿಯನ್ನು ಕಟುವಾಗಿ ಟೀಕಿಸಿದ್ದಾರೆ.

"ಈ ವ್ಯಕ್ತಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಒಬ್ಬ ವ್ಯಕ್ತಿಯ ಪೂರ್ವಾಪರ ಗೊತ್ತಿರದೆ ಅವರ ಬಗ್ಗೆ ಎಂದಿಗೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ನಿಮಗೆ ಎಲ್ಲಾ ಗೊತ್ತು ಎಂದು ನೀವು ಅಂದುಕೊಳ್ಳಬಹುದು. ಆದರೆ ನಿಮಗೇನೂ ಗೊತ್ತಿರುವುದಿಲ್ಲ," ಎಂದು ಉದನಾ ಟ್ರೋಲ್‌ಗಳ ವಿರುದ್ಧ ಚಾಟಿ ಬೀಸಿದ್ದಾರೆ.

SCROLL FOR NEXT