ಕ್ರಿಕೆಟ್

'ನನ್ನ ಟಿ20 ಕ್ರಿಕೆಟ್ ಸಾಮರ್ಥ್ಯ ಕುಸಿಯುತ್ತಿದೆ ಎಂದು ಹಲವರು ಭಾವಿಸಿದ್ದಾರೆ.. ಆದರೆ ಮತ್ತೆ ಉತ್ತುಂಗದಲ್ಲಿದ್ದೇನೆ'; ಟೀಕಾಕಾರರಿಗೆ ಕೊಹ್ಲಿ ಖಡಕ್ ತಿರುಗೇಟು

Srinivasamurthy VN

ಬೆಂಗಳೂರು: ಬ್ಯಾಕ್ ಟು ಬ್ಯಾಕ್ ಟಿ20 ಶತಕ ಸಿಡಿಸುವ ಮೂಲಕ ಆರ್ ಸಿಬಿ ರನ್ ಮೆಶಿನ್ ವಿರಾಟ್ ಕೊಹ್ಲಿ ಮತ್ತೆ ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ತಮ್ಮ ಸ್ಟ್ರೈಕ್ ರೇಟ್‌ ಬಗ್ಗೆ ಮಾತೆತ್ತಿದ್ದ ಟೀಕಾಕಾರರಿಗೆ ಬ್ಯಾಟ್‌ನಲ್ಲೇ ಉತ್ತರಿಸಿದ ಕೊಹ್ಲಿ, ಬಳಿಕ ಮಾತಿನ ಛಾಟಿ ಬೀಸಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ನನಗೆ ನನ್ನ ಪ್ರದರ್ಶನ ನಿಜಕ್ಕೂ ಉತ್ತಮ ಅನಿಸಿತು. ನನ್ನ ಟಿ20 ಕ್ರಿಕೆಟ್ ಸಾಮರ್ಥ್ಯ ಕುಸಿಯುತ್ತಿದೆ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ. ಆದರೆ ನನಗೆ ಹಾಗೇನೂ ಅನಿಸುತ್ತಿಲ್ಲ. ನಾನು ಮತ್ತೊಮ್ಮೆ ನನ್ನೊಳಗಿನ ಅತ್ಯುತ್ತಮ ಟಿ20 ಕ್ರಿಕೆಟ್ ಆಡುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಅಂತೆಯೇ “ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆ. ಟಿ20 ಕ್ರಿಕೆಟ್ ಅನ್ನು ಹೀಗೆಯೇ ಆಡುತ್ತೇನೆ. ನಾನು ಮೈದಾನದಲ್ಲಿ ಅಂತರವನ್ನು ನೋಡಿಕೊಂಡು ಚೆಂಡನ್ನು ಬೌಂಡರಿಗೆ ಅಟ್ಟುತ್ತೇನೆ. ಪರಿಸ್ಥಿತಿಯನ್ನು ನೋಡಿಕೊಂಡು ಅವಕಾಶ ಸಿಕ್ಕಂತೆಲ್ಲಾ ದೊಡ್ಡ ಹೊಡೆತಕ್ಕೆ ಕೈ ಹಾಕುತ್ತೇನೆ. ಆಟಗಾರನು ಸಂದರ್ಭವನ್ನು ಅರ್ಥ ಮಾಡಿಕೊಂಡು ಆಡಬೇಕು. ತಂಡದ ಅಗತ್ಯಕ್ಕನುಗುಣವಾಗಿ ಹೊಡೆತಗಳನ್ನು ನಿರ್ಧರಿಸಬೇಕು. ಈ ಸಮಯದಲ್ಲಿ ನನ್ನ ಆಟ ಮತ್ತು ನಾನು ಹೇಗೆ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಖುಷಿ ಇದೆ ಎಂದು ಕೊಹ್ಲಿ ಹೇಳಿದ್ದಾರೆ.

ಇನ್ನು ಸತತ 16ನೇ ಆವೃತ್ತಿಯಲ್ಲೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಘಾತ ಎದುರಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಕಪ್‌ ಗೆಲ್ಲುವ ಕನಸನ್ನು ಮತ್ತೊಂದು ವರ್ಷಕ್ಕೆ ಮುಂದೂಡಿದೆ. ತಂಡವು ಪ್ಲೇಆಫ್ ಅರ್ಹತೆಗಾಗಿ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಗುಜರಾತ್ ತಂಡದ ಶುಭಮನ್ ಗಿಲ್ ರ ಅಮೋಘ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್‌ಗಳ ಸೋಲನ್ನು ಎದುರಿಸಿ  ಆರ್‌ಸಿಬಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. 

ಪಂದ್ಯದಲ್ಲಿ ಆರ್‌ಸಿಬಿ ಸೋತರೂ, ಅಭಿಮಾನಿಗಳು ಖುಷಿ ಪಡುವ ಒಂದೇ ಒಂದು ಅಂಶವೆಂದರೆ ಅದು ವಿರಾಟ್‌ ಕೊಹ್ಲಿ ಶತಕ. ಮಳೆ ಬಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್‌ ಬ್ಯಾಟ್‌ ಬೀಸುವವರಿಗೆ ಸವಾಲು ಎಸೆದಿತ್ತು. ಅಂತಹ ಸನ್ನಿವೇಶದಲ್ಲೂ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಕಿಂಗ್‌ ಕೊಹ್ಲಿ, ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರು.
 

SCROLL FOR NEXT