ನವದೆಹಲಿ: ಇಂದು ಅಂದರೆ ಡಿಸೆಂಬರ್ 8 ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಕರಾಳ ಭಾನುವಾರವಾಗಿದ್ದು, ಇಂದು ಒಂದೇ ದಿನ ಭಾರತ ಕ್ರಿಕೆಟ್ ತಂಡ ಮೂರು ಹೀನಾಯ ಸೋಲು ಕಂಡಿದೆ.
ಹೌದು.. ಇಂದು ಭಾರತ ತಂಡ ಮೂರು ವಿಭಿನ್ನ ಸ್ಥಳಗಳಲ್ಲಿ 3 ಪಂದ್ಯಗಳನ್ನು ಸೋತಿದ್ದು, ಅಡಿಲೇಡ್‌ನಲ್ಲಿ ಪುರುಷ ತಂಡದ ಟೆಸ್ಟ್ ಸೋಲು ಕಂಡಿದೆ.
ಅತ್ತ ಬ್ರಿಸ್ಬೇನ್‌ನಲ್ಲಿ ಮಹಿಳಾ ಏಕದಿನ ತಂಡ ಕೂಡ ಸೋಲು ಕಂಡಿದ್ದು, ದುಬೈನಲ್ಲಿ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಭಾರತ ಯುವ ಪಡೆಯೂ ಸೋಲು ಕಂಡಿದೆ. ಹೀಗೆ ಒಂದೇ ದಿನ ಮೂರು ಸೋಲುಗಳು ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ ನೀಡಿದ್ದು, ಮೂರು ಪಂದ್ಯಗಳಲ್ಲೂ ಭಾರತ ಏಕಪಕ್ಷೀಯವಾಗಿ ಸೋತಿರುವುದು ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ.
ಅಡಿಲೇಡ್‌ನಲ್ಲಿ 10 ವಿಕೆಟ್ಗಳ ಸೋಲು
ಅಡಿಲೇಡ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳಿಂದ ಸೋಲಿಸಿತು. ಕಳಪೆ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾಗೆ ಗೆಲ್ಲಲು ಕೇವಲ 19 ರನ್‌ಗಳ ಗುರಿ ನೀಡಿತು. ಇದನ್ನು ಆಸಿಸ್ ತಂಡ 4ನೇ ಓವರ್ ನಲ್ಲಿ ಗಳಿಸಿ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಮಹಿಳಾ ಕ್ರಿಕೆಟ್ ತಂಡಕ್ಕೆ 122 ರನ್ ಸೋಲು
ಮತ್ತೊಂದೆಡೆ, ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 122ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಎಲಿಸ್ ಪೆರ್ರಿ ಮತ್ತು ಜಾರ್ಜಿಯಾ ವಾಲ್ ಅವರ ಅದ್ಭುತ ಶತಕಗಳ ನೆರವಿನಿಂದ 371 ರನ್ ಪೇರಿಸುತು. ಈ ಮೊತ್ತವನ್ನು ಬೆನ್ನು ಹತ್ತಿದ ಭಾರತ ಮಹಿಳಾ ಕ್ರಿಕೆಟ್ ತಂಡ 44.5 ಓವರ್‌ಗಳಲ್ಲಿ ಕೇವಲ 249 ರನ್‌ಗಳಿಸಿ ಆಲೌಟ್ ಆಯಿತು. ಆ ಮೂಲಕ 122 ರನ್‌ಗಳ ಹೀನಾಯ ಸೋಲು ಕಂಡಿತು.
ಅಂಡರ್ 19 ಏಷ್ಯಾಕಪ್ ಫೈನಲ್ ಸೋಲು
ಅಂಡರ್ 19 ಏಷ್ಯಾಕಪ್‌ನಲ್ಲೂ ಭಾರತಕ್ಕೆ ನಿರಾಶೆ ಎದುರಾಗಿದ್ದು, ಟೂರ್ನಿಯುದ್ದಕ್ಕೂ ಉತ್ತಮ ಫಲಿತಾಂಶದಿಂದ ಫೈನಲ್ ಪ್ರವೇಶ ಮಾಡಿದ್ದ ಭಾರತ ಯುವ ಪಡೆ ಫೈನಲ್ ನಲ್ಲಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡ 59 ರನ್‌ಗಳಿಂದ ಹೀನಾಯ ಸೋಲು ಕಂಡಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ಕೇವಲ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶ ನೀಡಿದ 199ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಭಾರತ ಯುವ ಪಡೆ, 35.2 ಓವರ್ ನಲ್ಲಿ 139 ರನ್‌ಗಳಿಸಿ ಆಲೌಟ್ ಆಯಿತು. ಆ ಮೂಲಕ 59 ರನ್ ಗಳ ಸೋಲು ಕಂಡಿತು.