ಡಲ್ಲಾಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಬಂದಿದ್ದು, ಪ್ರಬಲ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ದಾಖಲಿಸಿದೆ.
ಹೌದು.. ಡಲ್ಲಾಸ್ ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 125 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ 8 ವಿಕೆಟ್ ಕಳೆದುಕೊಂಡು 19 ಓವರ್ ನಲ್ಲೇ ಗುರಿ ಮುಟ್ಟಿತು.
ಬಾಂಗ್ಲಾಪರ ಲಿಟ್ಟನ್ ದಾಸ್ 36ರನ್ ಗಳಿಸಿದರೆ, ತೌಹೀದ್ ಹೃದೋಯ್ 40ರನ್ ಕಲೆಹಾಕಿ ಬಾಂಗ್ಲಾದೇಶ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಅಂತಿಮವಾಗಿ 19 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿ 2 ವಿಕೆಟ್ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.
ಶ್ರೀಲಂಕಾ ಪರ ನುವಾನ್ ತುಷಾರಾ 4 ವಿಕೆಟ್ ಕಬಳಿಸಿದರೆ, ನಾಯಕ ವನಿಂದು ಹಸರಂಗಾ 2 ವಿಕೆಟ್ ಪಡೆದರು. ಧನಂಜಯ ಡಿಸಿಲ್ವಾ ಮತ್ತು ಮತೀಶಾ ಪತಿರಾಣ ತಲಾ ಒಂದು ವಿಕೆಟ್ ಪಡೆದರು.
ರನ್ ಗಳಿಸಲು ತಿಣುಕಾಡಿದ ಶ್ರೀಲಂಕಾ
ಇನ್ನು ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಬ್ಯಾಟಿಂಗ್ ಗೆ ಅಷ್ಟೇನೂ ಸಹಕಾರಿಯಲ್ಲದ ಪಿಚ್ ನಲ್ಲಿ ರನ್ ಗಳಿಸಲು ತಿಣುಕಾಡಿತು. ಶ್ರೀಲಂಕಾ ಬ್ಯಾಟರ್ ಗಳು ಬಾಂಗ್ಲಾ ಬೌಲರ್ ಗಳ ಎದುರು ರನ್ ಗಳಿಸುವುದಿರಲಿ, ವಿಕೆಟ್ ಉಳಿಸಿಕೊಳ್ಳಲು ಪರದಾಡಿದರು. ಉತ್ತಮ ಆರಂಭದ ಹೊರತಾಗಿಯೂ ಶ್ರೀಲಂಕಾ ಉತ್ತಮ ಸ್ಕೋರ್ ಕಲೆಹಾಕುವಲ್ಲಿ ವಿಫಲವಾಯಿತು.
ಆರಂಭಿಕ ಆಟಗಾರ ಪಥುಮ್ ನಿಸ್ಸಾಂಕಾ 47 ರನ್ ಗಳಿಸಿ ಅರ್ಧಶತಕ ವಂಚಿತರಾದರು. ಇವರ ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡಲೇ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಧನಂಜಯ ಡಿಸಿಲ್ವಾ (21ರನ್), ಅಸಲಂಕಾ (19) ಮತ್ತು ಮ್ಯಾಥ್ಯೂಸ್ (16)ಗಳಿಸಿದರೂ ಬಾಂಗ್ಲಾದೇಶ ತಂಡಕ್ಕೆ ಸವಾಲಿನ ಗುರಿ ಪೇರಿಸುವಲ್ಲಿ ವಿಫಲರಾದರು.
4 ಬ್ಯಾಟರ್ ಗಳು ಶೂನ್ಯ ಸುತ್ತಿದರೆ, ಇಬ್ಬರು ಬ್ಯಾಟರ್ ಗಳು ಎರಡಂಕಿ ಮೊತ್ತ ಕೂಡ ದಾಟದೇ ಔಟಾಗಿದ್ದು ಲಂಕಾ ತಂಡದ ಸೋಲಿಗೆ ಕಾರಣವಾಯಿತು.
ಬಾಂಗ್ಲಾದೇಶ ಪರ ಮುಸ್ತಫಿಜುರ್ ಮತ್ತು ರಿಷಾದ್ ಹೊಸ್ಸೇನ್ ತಲಾ ಮೂರು ವಿಕೆಟ್ ಪಡೆದು ಲಂಕಾ ಪತನಕ್ಕೆ ಕಾರಣವಾದರು.ಟಸ್ಕೀನ್ ಅಹ್ಮದ್ 2 ಮತ್ತು ಹಸನ್ ಸಕಿಬ್ 1 ವಿಕೆಟ್ ಪಡೆದರು.