ಆ್ಯಂಟಿಗುವಾ: ಐಸಿಸಿ ಟಿ0 ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿ ಸೆಮೀಸ್ ನತ್ತ ಚಿತ್ತ ಹರಿಸಿದ್ದು, ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾರ ಒಂದು ಹಾಸ್ಯಾತ್ಮಕ ವಾರ್ನಿಂಗ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಿನ್ನೆ ಆ್ಯಂಟಿಗುವಾ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ಭಾರತ ತಂಡ 50 ರನ್ ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಕುಲದೀಪ್ ಯಾದವ್ ಮೂರು ಪ್ರಮುಖ ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.
ಆದರೆ ಇದೇ ಪಂದ್ಯದಲ್ಲಿ ಕುಲದೀಪ್ ಯಾದವ್ ಗೆ ನಾಯಕ ರೋಹಿತ್ ಶರ್ಮಾ ಹಾಸ್ಯಾತ್ಮಕವಾಗಿ ವಾರ್ನಿಂಗ್ ನೀಡಿದ ಘಟನೆ ಕೂಡ ನಡೆಯಿತು.
ಬಾಂಗ್ಲಾದೇಶ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಭಾರತದ ಕುಲದೀಪ್ ಯಾದವ್ ಗೆ ಸಿಕ್ಸರ್ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ನಂತರದ ಎಸೆತದಲ್ಲಿ ಶಕೀಬ್ ರನ್ನು ಕುಲದೀಪ್ ಔಟ್ ಮಾಡುವ ಮೂಲಕ ಸೇಡು ತೀರಿಸಿಕೊಂಡರು. ನಂತರ ಕ್ರೀಸ್ ಗೆ ಬಂದ ಮಹಮದುಲ್ಲಾ ಕೂಡ ತಾವು ಎದುರಿಸಿದ ಮೊದಲ ಎಸೆತವನ್ನೇ ಆಕ್ರಮಣಕಾರಿಯಾಗಿ ಆಡಲು ಮುಂದಾದರು.
ಬಳಿಕ ಕುಲದೀಪ್ ಯಾದವ್ ಗೂಗ್ಲಿ ಎಸೆತ ಎಸೆದು ಅವರನ್ನು ಎಲ್ ಬಿ ಬಲೆಗೆ ಕೆಡವುವ ಯತ್ನ ಮಾಡಿದರು. ಇದನ್ನು ಕಂಡ ನಾಯಕ ರೋಹಿತ್ ಶರ್ಮಾ, ಕೂಡಲೇ ''ಯಾಕೋ ಏನಾಯ್ತು..,ಈಗ ತಾನೇ ಬಂದ.. ಆಡ್ಲಿ ಬಿಡೋ... ಆಗಲೇ ಔಟ್ ಮಾಡಬೇಡ.. ಗೆರೆ ದಾಟಿ ಆಡಲಿ..ಈಗಷ್ಟೇ ಕ್ರೀಸ್‌ಗೆ ಬಂದಿದ್ದಾನೆ'' ಎಂದು ಹಾಸ್ಯಾತ್ಮಕವಾಗಿ ಹೇಳಿದ್ದಾರೆ.
ಇವಿಷ್ಟೂ ಮಾತುಗಳು ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.