ದ್ವೀಪ ರಾಷ್ಟ್ರ ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ನ ಬ್ರಿಡ್ಜ್ ಟೌನ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಇದೀಗ ವೆಸ್ಟ್ ಇಂಡೀಸ್ ಗೆ 'ಅತ್ಯಂತ ಅಪಾಯಕಾರಿ' ಬೆರಿಲ್ ಚಂಡಮಾರುತ ಅಪ್ಪಳಿಸುತ್ತಿದ್ದು ಟೀಮ್ ಇಂಡಿಯಾ ಸದಸ್ಯರು ಹಲವು ದಿನಗಳವರೆಗೆ ಬಾರ್ಬಡೋಸ್‌ನಲ್ಲಿ ಸಿಲುಕುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, T20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಭಾನುವಾರ ಬೆಳಿಗ್ಗೆ ಬೆರಿಲ್ ಚಂಡಮಾರುತವು ವರ್ಗ ಗ್ರೇಡ್ 3 ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಮಾರುತವು ಗಂಟೆಗೆ 120 ಕಿಲೋಮೀಟರ್ನಷ್ಟಿದ್ದು ಚಂಡಮಾರುತವು ಕ್ಷಣದಿಂದ ಕ್ಷಣಕ್ಕೆ ಬಲಗೊಳ್ಳುತ್ತಿದೆ.
ಬೆರಿಲ್ ಚಂಡಮಾರುತ ಪೋರ್ಟೊ ರಿಕೊದ ಆಗ್ನೇಯ ಮತ್ತು ವೆನೆಜುವೆಲಾದ ಉತ್ತರ ದ್ವೀಪಗಳ ಮೇಲೆ ಮಾರಣಾಂತಿಕ ಗಾಳಿ ಮತ್ತು ಚಂಡಮಾರುತ ಅಪ್ಪಳಿಸಲಿದೆ. ಬೆರಿಲ್ ಚಂಡಮಾರುತ ಬಾರ್ಬಡೋಸ್‌ನ ಪೂರ್ವ-ಆಗ್ನೇಯದ 355 ಮೈಲುಗಳಷ್ಟು ದೂರದಲ್ಲಿದ್ದು ಮುಂಬರುವ ಗಂಟೆಗಳಲ್ಲಿ ಪರಿಸ್ಥಿತಿಯು ತೀವ್ರವಾಗಬಹುದು.
ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಸದಸ್ಯರು ದ್ವೀಪ ರಾಷ್ಟ್ರವನ್ನು ತೊರೆಯುವ ಸಾಧ್ಯತೆ ತೀರಾ ಕಡಿಮೆ. ಈ ಬಗ್ಗೆ ಆಜ್ ತಕ್ನ ವಿಕ್ರಾಂತ್ ಗುಪ್ತಾ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ. ಎಲ್ಲರೂ ಸದ್ಯಕ್ಕೆ ಬಾರ್ಬಡೋಸ್‌ನಲ್ಲಿ ಸಿಲುಕಿದ್ದಾರೆ. ಈಗಾಗಲೇ ವಿಮಾನಗಳನ್ನು ರದ್ದುಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆ ಎಂದು ಗುಪ್ತಾ ಹೇಳಿದರು. ರೋಹಿತ್ ಶರ್ಮಾ ಪಡೆ ದ್ವೀಪದಲ್ಲಿ ಸಿಲುಕಿಕೊಂಡಿದ್ದು, ಪರಿಸ್ಥಿತಿ ಸುಧಾರಿಸಿದ ನಂತರವೇ ಹೊರಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.