ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು 'ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರನಾಗಿ ಉಳಿದಿದ್ದಾರೆ. ಆದರೆ, ಅವರ ಅನುಭವದ ಹೊರತಾಗಿಯೂ, ರೋಹಿತ್ ಶರ್ಮಾ ನಿರ್ಗಮನದ ನಂತರ ಆಯ್ಕೆ ಸಮಿತಿಯು ಅವರನ್ನು ಟೆಸ್ಟ್‌ಗಳಲ್ಲಿ ನಾಯಕ ಅಥವಾ ಉಪನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಿಲ್ಲ. ಬದಲಿಗೆ ಶುಭಮನ್ ಗಿಲ್ ನಾಯಕನಾದರೆ, ರಿಷಭ್ ಪಂತ್ ಉಪನಾಯಕನಾಗಿ ಆಯ್ಕೆಯಾದರು. ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಉತ್ತಮ ಪ್ರದರ್ಶನ ನೀಡಿದ ನಂತರ, ಜಡೇಜಾ ಅವರು ನಾಯಕನ ಜವಾಬ್ದಾರಿಯನ್ನು ನಿರ್ವಹಿಸುವ ಸಮಯ ಕಳೆದುಹೋಗಿದೆ ಎಂದು ಒಪ್ಪಿಕೊಂಡರು.
ಶುಭಮನ್ ಗಿಲ್ ಜೊತೆಗೆ ಉತ್ತಮ ಜೊತೆಯಾಟವಾಡಿದ ಜಡೇಜಾ, 137 ಎಸೆತಗಳಲ್ಲಿ 89 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. 15 ವರ್ಷಗಳಿಗೂ ಹೆಚ್ಚು ವರ್ಷದ ವೃತ್ತಿಜೀವನದಲ್ಲಿ ಇಂಗ್ಲೆಂಡ್‌ಗೆ ಮೂರನೇ ಬಾರಿ ಪ್ರವಾಸದಲ್ಲಿರುವ ಜಡೇಜಾ ಅವರನ್ನು, ಅವರ ಅವಧಿಯಲ್ಲಿ ನಾಯಕತ್ವದ ಮಹತ್ವಾಕಾಂಕ್ಷೆ ಅವರ ಮನಸ್ಸಿನಲ್ಲಿ ಹಾದು ಹೋಗಿದೆಯೇ ಎಂದು ಪ್ರಶ್ನಿಸಲಾಯಿತು. ಎರಡನೇ ದಿನದಾಟ ಅಂತ್ಯದಲ್ಲಿ ಉತ್ತರಿಸಿದ ಅವರು, 'ಇಲ್ಲ, ಈಗ ಆ ಸಮಯ ಕಳೆದುಹೋಗಿದೆ' ಎಂದು ನಗುಮುಖದಿಂದಲೇ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಿಲ್ ಅವರ ಬ್ಯಾಟಿಂಗ್ ಬಗ್ಗೆ ಉತ್ತರಿಸಿದ ಜಡೇಜಾ, 'ಪ್ರಾಮಾಣಿಕವಾಗಿ, ಅವರು ತುಂಬಾ ಆತ್ಮವಿಶ್ವಾಸದಿಂದ ಕಾಣುತ್ತಾರೆ. ಅವರು ನಾಯಕತ್ವದ ಜವಾಬ್ದಾರಿ ಹೊತ್ತವರಂತೆ ಅವರು ಬ್ಯಾಟಿಂಗ್ ವೇಳೆ ಕಾಣಿಸುವುದಿಲ್ಲ. ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ಎಲ್ಲವನ್ನೂ ತಮ್ಮೊಂದಿಗೆ ಹೊತ್ತುಕೊಂಡಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ನನಗೆ ಅಂತಹದ್ದೇನೂ ಅನಿಸುವುದಿಲ್ಲ. ದುರದೃಷ್ಟವಶಾತ್, ಚೆಂಡು ಅವರ (ಫೀಲ್ಡರ್) ಕೈಯಲ್ಲಿ ಹೋಯಿತು. ಆದರೆ ಇಂದು, ಈ ಇನಿಂಗ್ಸ್‌ನಲ್ಲಿ ಅವರು ಔಟ್ ಆಗುತ್ತಾರೆ ಎಂದು ನನಗೆ ಅನಿಸಲಿಲ್ಲ. ಅವರು ತುಂಬಾ ಚೆನ್ನಾಗಿ ಆಡಿದರು. ನಾವು ಒಟ್ಟಿಗೆ ಬ್ಯಾಟಿಂಗ್ ಮಾಡುವಾಗ, ನಮ್ಮ ಜೊತೆಯಾಟದ ಬಗ್ಗೆ ಮಾತನಾಡುತ್ತಿದ್ದೆವು. ದೀರ್ಘ ಜೊತೆಯಾಟದಲ್ಲಿ ನಾವು ಪರಸ್ಪರ ಮಾತನಾಡುತ್ತಲೇ ಇರುತ್ತೇವೆ' ಎಂದರು.
ಜಡೇಜಾ ಮತ್ತು ಗಿಲ್ 203 ರನ್‌ಗಳ ಜೊತೆಯಾಟ ನಡೆಸಿ ಭಾರತವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು. ಜೋಶ್ ಟಂಗ್ ಅವರ ಎಸೆತದಲ್ಲಿ ಜಡೇಜಾ ವಿಕೆಟ್ ಕೀಪರ್ ಜೇಮೀ ಸ್ಮಿತ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ಜಡೇಜಾ ನಿರ್ಗಮನದ ನಂತರ, ಗಿಲ್ ವಾಷಿಂಗ್ಟನ್ ಸುಂದರ್ ಜೊತೆ 144 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಇಂಗ್ಲೆಂಡ್‌ನ ಬೌಲರ್‌ಗಳ ಬೆವರಿಳಿಸಿದರು. ಬಳಿಕ ಜೋ ರೂಟ್ 103 ಎಸೆತಗಳಲ್ಲಿ 42 ರನ್ ಗಳಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ಔಟ್ ಮಾಡಿದರು. ಬಳಿಕ ಭಾರತದ ಇನಿಂಗ್ಸ್‌ಗೆ ದ್ವಿಶತಕದ ಕೊಡುಗೆ ನೀಡಿದ ಗಿಲ್ 269ಕ್ಕೆ ಔಟ್ ಆದರು. ಭಾರತವು ಅಂತಿಮವಾಗಿ 587 ರನ್ ಕಲೆಹಾಕಿತು.