ಮ್ಯಾಂಚೆಸ್ಟರ್: ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ವಿವಾದವೊಂದು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇಂಗ್ಲೆಂಡ್ ವೇಗಿ Brydon Carse ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಕೇಳಿಬಂದಿದೆ.
ಹೌದು.. ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿದ್ದು, ಈ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ ಯಾವುದೇ ಪ್ರಯತ್ನ ಮಾಡಲಿಲ್ಲ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಂದ್ಯದ ಕೊನೆಯ ದಿನದಂದು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ತಮ್ಮ ಕೈಲಾದಷ್ಟು ಎಲ್ಲ ಪ್ರಯತ್ನ ಮಾಡಿದರು. ತಮ್ಮಲ್ಲಿರುವ ಎಲ್ಲಾ ತಂತ್ರಗಳನ್ನು ಜಾರಿಗೆ ತಂದರು.
ಬೌಲರ್‌ಗಳನ್ನು ಮತ್ತು ಫೀಲ್ಡ್ ಸೆಟಪ್ ಅನ್ನು ಪದೇ ಪದೇ ಬದಲಾಯಿಸಿದರು. ಆದರೂ ಅಪೇಕ್ಷಿತ ಫಲಿತಾಂಶ ಬರಲಿಲ್ಲ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಬೆನ್ ಸ್ಟೋಕ್ಸ್ ಭಾರತೀಯ ಬ್ಯಾಟರ್ ಗಳ ವಿರುದ್ಧ ಸ್ಲೆಡ್ಜಿಂಗ್ ಅಸ್ತ್ರವನ್ನೂ ಬಿಟ್ಟರು. ಪದೇ ಪದೇ ಭಾರತೀಯ ಆಟಗಾರರನ್ನು ಕೆಣಕುತ್ತಾ ಅವರ ವಿಕೆಟ್ ಪಡೆಯಲು ಪ್ರಯತ್ನಿಸಿದರು.
ಆದರೆ ಅದೂ ಸಫಲವಾಗಲಿಲ್ಲ. ಭಾರತದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಏಕಾಗ್ರತೆಯನ್ನು ಕಳೆದುಕೊಳ್ಳದೆ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದರು. ಭಾರತೀಯ ಬ್ಯಾಟರ್ ಗಳ ವಿರುದ್ಧ ಇಂಗ್ಲೆಂಡ್ ಬೌಲರ್ ಗಳು ಅಕ್ಷರಶಃ ಹೈರಾಣಾದರು.
ಚೆಂಡು ವಿರೂಪಗಳಿಸಿದ ಇಂಗ್ಲೆಂಡ್ ಬೌಲರ್
ಇನ್ನು ಇದೇ ವೇಳೆ ಇಂಗ್ಲೆಂಡ್ ಬೌಲರ್ ಬ್ರೈಡನ್ ಕಾರ್ಸ್ ಚೆಂಡು ವಿರೂಪಗೊಳಿಸಿದರು ಎನ್ನಲಾಗಿದೆ. ಪಂದ್ಯದ ಐದನೇ ದಿನದಂದು, ಇಂಗ್ಲೆಂಡ್ ವೇಗಿ ಬ್ರೈಡನ್ ಕಾರ್ಸೆ ತನ್ನ ಬೂಟುಗಳಿಂದ ಚೆಂಡನ್ನು ನೆಲಕ್ಕೆ ಉಜ್ಜುವ ಮೂಲಕ ಚೆಂಡುವಿರೂಪಗೊಳಿಸಲು ಯತ್ನಿಸಿದರು ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಕಾರ್ಸೆ ತಾವು ಧರಿಸಿದ್ದ ಶೂ ಮೂಲಕ ಚೆಂಡನ್ನು ಉಜ್ಜುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಂದ್ಯ ಡ್ರಾದಲ್ಲಿ ಅಂತ್ಯ
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್‌ಗಳ ಮುನ್ನಡೆ ಸಾಧಿಸಿದರೂ, ಇಂಗ್ಲೆಂಡ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ವಿಶೇಷವಾಗಿ ನಿರ್ಣಾಯಕ ಐದನೇ ದಿನದಂದು, ಇಂಗ್ಲೆಂಡ್ ಗೆಲ್ಲಲು 8 ವಿಕೆಟ್‌ಗಳು ಬೇಕಾಗಿದ್ದವು. ಆದರೆ, ಟೀಮ್ ಇಂಡಿಯಾ ಪರ, ಕೆಎಲ್ ರಾಹುಲ್ (90) ಮತ್ತು ಶುಭ್‌ಮನ್ ಗಿಲ್ (102) ಅದ್ಭುತ ಬ್ಯಾಟಿಂಗ್ ಮಾಡಿದರು. ಈ ಜೋಡಿ ಔಟಾದ ಬಳಿಕ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಕೂಡ ಕ್ರೀಸ್‌ನಲ್ಲಿ ನಿಂತು ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದರು.