ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿ ಭಾನುವಾರ ಮುಕ್ತಾಯವಾಗಿದ್ದು, ಇದೀಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮುಂಬರುವ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 22ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ.
ಐಎಎನ್‌ಎಸ್ ವರದಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿದೆ. ಆದರೆ, ರಾಹುಲ್ ಈ ಆಫರ್ ಅನ್ನು ತಿರಸ್ಕರಿಸಿದ್ದು, ತಂಡಕ್ಕಾಗಿ ಬ್ಯಾಟ್ಸ್‌ಮನ್ ಆಗಿ ಆಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಯಾರಾಗಲಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ?
ವರದಿಗಳ ಪ್ರಕಾರ, ಕೆಎಲ್ ರಾಹುಲ್ ನಾಯಕನ ಸ್ಥಾನವನ್ನು ತಿರಸ್ಕರಿಸಿರುವುದರಿಂದ ಇದೀಗ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡದ ನಾಯಕನಾಗುವ ಎಲ್ಲ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಹುದ್ದೆಗೆ ರಾಹುಲ್ ಮತ್ತು ಅಕ್ಷರ್ ನಡುವೆ ಪೈಪೋಟಿ ಇತ್ತು. ಆದರೆ, ರಾಹುಲ್ ಈ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ, ಐಪಿಎಲ್ 2025ನೇ ಆವೃತ್ತಿಯಲ್ಲಿ ಅಕ್ಷರ್ ಪಟೇಲ್ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.
ಚಾಂಪಿಯನ್ಸ್ ಟ್ರೋಫಿ 2025ರ ಗೆಲುವಿನ ತಂಡದಲ್ಲಿ ಒಬ್ಬರಾದ ಅಕ್ಷರ್ ಅವರಿಗೆ ಐಪಿಎಲ್‌ನಲ್ಲಿ ಯಾವುದೇ ತಂಡವನ್ನು ಮುನ್ನಡೆಸಿರುವ ಅನುಭವವಿಲ್ಲ. ಆದರೆ, ಅವರು ಫ್ರಾಂಚೈಸಿಯೊಂದಿಗೆ ದೀರ್ಘಕಾಲದಿಂದ ಇದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲು ಕಾರಣವಾಗಿದೆ.
ಐಪಿಎಲ್ ಆರಂಭದ ಪಂದ್ಯಗಳಿಗೆ ಕೆಎಲ್ ರಾಹುಲ್ ಗೈರು
ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಡೆತ ಬಿದ್ದಿದ್ದು, ಒಂದೆರಡು ಆರಂಭಿಕ ಪಂದ್ಯಗಳಲ್ಲಿ ರಾಹುಲ್ ಆಡುವುದು ಅನುಮಾನವಾಗಿದೆ. ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಏಪ್ರಿಲ್‌ನಲ್ಲಿ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ಕೆಲವು ಪಂದ್ಯಗಳಿಂದ ದೂರ ಉಳಿಯುವ ಸಾಧ್ಯತೆಯಿದೆ.
ಕಳೆದ ಬಾರಿ ಎಲ್ಎಸ್‌ಜಿ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸಿದ್ದರು. ಆದರೆ, ಟ್ರೋಫಿ ಗೆಲ್ಲಲು ವಿಫಲವಾದ ಕಾರಣ ಮೆಗಾ ಹರಾಜಿಗೂ ಮುನ್ನ ತಂಡವು ರಾಹುಲ್ ಅವರನ್ನು ಕೈಬಿಟ್ಟಿತ್ತು. ಬಳಿಕ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು.