ನವದೆಹಲಿ: ಇನ್ನೂ 40 ದಾಟುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟಿಗರು ನಿವೃತ್ತಿ ಹೇಳುತ್ತಿರುವ ಈ ಹೊತ್ತಲ್ಲಿ ಅತ್ತ ಓರ್ವ ಆಟಗಾರ ತನ್ನ 62ನೇ ವಯಸ್ಸಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ.
ಅಚ್ಚರಿಯಾದರೂ ಇದು ಸತ್ಯ... ಇಷ್ಟು ದಿನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಯಾರು ಎಂದು ಕೇಳಿದರೆ ಈವರೆಗೆ ಓಸ್ಮಾನ್ ಗೋಕರ್ ಹೆಸರು ಕೇಳಿ ಬರುತ್ತಿತ್ತು. ಆದರೀಗ ಈ ದಾಖಲೆ ಇದೀಗ ಇತಿಹಾಸ ಪುಟ ಸೇರಿದ್ದು, ಓಸ್ಮಾನ್ ಅವರಿಗಿಂತಲೂ ಹಿರಿಯ ಆಟಗಾರರೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಫಾಕ್‌ಲ್ಯಾಂಡ್ ಐಲ್ಯಾಂಡ್ ಬರೊಬ್ಬರಿ 62 ವರ್ಷ ವಯಸ್ಸಿನ ಮ್ಯಾಥ್ಯೂ ಬ್ರೌನ್ಲೀ (Matthew Brownlee) ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. ಆ ಮೂಲಕ 62ನೇ ವಯಸ್ಸಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಮ್ಯಾಥ್ಯೂ ಬ್ರೌನ್ಲೀ ಪಾತ್ರರಾಗಿದ್ದಾರೆ.
ಕೋಸ್ಟಾರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಫಾಕ್‌ಲ್ಯಾಂಡ್ ಐಲ್ಯಾಂಡ್ ಪರ ಕಣಕ್ಕಿಳಿಯುವ ಮೂಲಕ ಮ್ಯಾಥ್ಯೂ ಬ್ರೌನ್ಲೀ ಈ ಸಾಧನೆ ಮಾಡಿದ್ದು, ಇದರೊಂದಿಗೆ ಮ್ಯಾಥ್ಯೂ ಬ್ರೌನ್ಲೀ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಓಸ್ಮಾನ್ ಗೋಕರ್ ದಾಖಲೆ ಉಡೀಸ್
ಮ್ಯಾಥ್ಯೂ ಬ್ರೌನ್ಲೀ ಅವರ ಈ ಸಾಧನೆಗೂ ಮುನ್ನ ಈ ದಾಖಲೆ ಓಸ್ಮಾನ್ ಗೋಕರ್ ಹೆಸರಿನಲ್ಲಿತ್ತು. 2019 ರಲ್ಲಿ ಇಲ್ಫೊವ್ ಕೌಂಟಿಯಲ್ಲಿ ನಡೆದ ರೋಮೇನಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಟರ್ಕಿಯ ಪರ 59 ವರ್ಷದ ಓಸ್ಮಾನ್ ಗೋಕರ್ ಕಣಕ್ಕಿಳಿದಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಮ್ಯಾಥ್ಯೂ ಬ್ರೌನ್ಲೀ ಹಿಂದಿಕ್ಕಿದ್ದಾರೆ.
ಆ ಮೂಲಕ ಕ್ರಿಕೆಟ್ ನಲ್ಲಿ ಯಾವುದೇ ದಾಖಲೆಗಳೂ ಶಾಶ್ವತವಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.
ಅಂದಹಾಗೆ ಈ ಪಂದ್ಯದಲ್ಲಿ ಫಾಕ್‌ಲ್ಯಾಂಡ್ ಐಲ್ಯಾಂಡ್ ತಂಡವು ಕೋಸ್ಟಾರಿಕಾ ವಿರುದ್ಧ 66 ರನ್ಗಳಿಂದ ಸೋಲನುಭವಿಸಿತು. ಈ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮ್ಯಾಥ್ಯೂ ಬ್ರೌನ್ಲೀ 1 ರನ್ ಕಲೆಹಾಕಿದ್ದರು. ಅಲ್ಲದೆ ಒಂದು ಓವರ್ ಬೌಲಿಂಗ್ ಸಹ ಮಾಡಿರುವುದು ವಿಶೇಷ.
ತಮ್ಮ ವೃತ್ತಿಜೀವನದುದ್ದಕ್ಕೂ, ಬ್ರೌನ್ಲೀ ಮೂರು T20I ಪಂದ್ಯಗಳನ್ನು ಆಡಿದ್ದು ಈ ಮೂರು ಇನ್ನಿಂಗ್ಸ್‌ಗಳಲ್ಲಿ ಆರು ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಎರಡು ನಾಟೌಟ್ ಇನ್ನಿಂಗ್ಸ್‌ಗಳು ಸೇರಿವೆ. ಅವರು ಕೇವಲ ಒಂದು ಓವರ್ ಬೌಲ್ ಮಾಡಿದ್ದು, ಇನ್ನೂ ತಮ್ಮ ಮೊದಲ ಅಂತರರಾಷ್ಟ್ರೀಯ ವಿಕೆಟ್ ಪಡೆದಿಲ್ಲ.
ಅಂತೆಯೇ ಇಂಗ್ಲೆಂಡ್‌ನ ಜೇಮ್ಸ್ ಸೌಥರ್, ಪಾಕಿಸ್ತಾನದ ಮೀರಾನ್ ಬಕ್ಷ್ ಮತ್ತು ಭಾರತದ ರುಸ್ತಮ್‌ಜಿ ಜಮ್ಶೆಡ್ಜ್‌ರಂತಹ ಪ್ರಸಿದ್ಧ ವ್ಯಕ್ತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರರ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿದ್ದಾರೆ.