ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಈ ಹಿಂದೆ ತನ್ನನ್ನು ಬೈದಿದ್ದ ಮಾಜಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar) ವಿರುದ್ಧ ಕೊನೆಗೂ ಸೇಡು ತೀರಿಸಿಕೊಂಡಿದ್ದಾರೆ.
ಹೌದು.. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ ತಂಡ ಹೀನಾಯವಾಗಿ ಸೋತಿತ್ತು. ಈ ಟೂರ್ನಿಯಲ್ಲಿ ಭಾರತದ ರಿಷಬ್ ಪಂತ್ ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಔಟಾಗುತ್ತಿದ್ದರು. ಅದೇ ರೀತಿ ಎಂಸಿಜಿ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲೂ ಪಂತ್ ಅನಗತ್ಯವಾಗಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಕಮೆಂಟರಿ ಬಾಕ್ಸ್ ನಲ್ಲಿದ್ದ ಸುನಿಲ್ ಗವಾಸ್ಕರ್ ಪಂತ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಅಂದು ಪಂತ್ ಮಾಡಿದ ಎಡವಟ್ಟಿನಿಂದಾಗಿ ಭಾರತ ಕೇವಲ 191 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಪಂತ್ ಕೂಡ ಕೇವಲ 28 ರನ್ ಗಳಿಗೇ ಔಟಾಗಿದ್ದರು. ಇದು ಗವಾಸ್ಕರ್ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು.
Stupid, Stupid, Stupid ವೈರಲ್
ಇದೇ ಸಂದರ್ಭದಲ್ಲಿ ಕಾಮೆಂಟರ್ ಮಾಡುತ್ತಿದ್ದ ಗವಾಸ್ಕರ್ 'Stupid, Stupid, Stupid' ಪದ ಬಳಕೆ ಮಾಡಿ ಪಂತ್ ರ ಬ್ಯಾಟಿಂಗ್ ವೈಖರಿಯನ್ನು ಕಟುವಾಗಿ ಟೀಕಿಸಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಅಂತೆಯೇ ಪಂತ್ ಗೂ ಇದರ ಬಿಸಿ ಮುಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಕೊನೆಗೂ ಸೇಡು ತಿರಿಸಿಕೊಂಡ ಪಂತ್
ಇನ್ನು ಗವಾಸ್ಕರ್ ಟೀಕೆ ಇದೀಗ ತಣ್ಣಗಾಗಿದೆ ಎನ್ನುವಾಗಲೇ ಮತ್ತೆ ಸುದ್ದಿಗೆ ಗ್ರಾಸವಾಗಿದೆ. ಈ ಬಾರಿ ಸ್ವತಃ ಪಂತ್ ಈ ಸುದ್ದಿಗೆ ನೀರೆರೆದಿದ್ದಾರೆ. ಗವಾಸ್ಕರ್ ಅವರ 'Stupid, Stupid, Stupid' ಪದ ಬಳಕೆ ಮಾಡಿ ಪಂತ್ ಕೂಡ ಗವಾಸ್ಕರ್ ವಿರುದ್ಧ ಆಕ್ರೋಶಗೊಂಡ ವಿಡಿಯೋ ವೈರಲ್ ಆಗುತ್ತಿದೆ.
ಜಾಹಿರಾತಿನಲ್ಲಿ ಪಂತ್ ಸೇಡು
ಅಂದಹಾಗೆ ಇದು ಪಂತ್ ಮತ್ತು ಗವಾಸ್ಕರ್ ಇಬ್ಬರೂ ಸೇರಿ ಮಾಡಿರುವ ಪ್ರವಾಸ ಸೇವಾ ಆ್ಯಪ್ ನ ಒಂದು ಜಾಹಿರಾತು. ಇದರಲ್ಲಿ ಗವಾಸ್ಕರ್ ಕೊನೆಯ ಕ್ಷಣದಲ್ಲಿ ಪ್ರವಾಸಕ್ಕೆ ಬಂದು ದುಬಾರಿ ಹಣ ನೀಡಲು ಒತ್ತಾಯಿಸಲ್ಪಡುತ್ತಾರೆ. ಈ ವೇಳೆ ಅಲ್ಲಿಯೇ ಇದ್ದ ಪಂತ್ ಇದನ್ನು ನೋಡಿ Stupid, Stupid, Stupid.., ಇದು ನಿಮ್ಮ ಪ್ರವಾಸ ಯೋಜನೆಯನ್ನೇ ಹಾಳು ಮಾಡುತ್ತದೆ.
ಇದೇನೂ ನಿಮ್ಮ ಹೊಟೆಲ್ ಗೇಮ್ ಅಲ್ಲ.. ಎಂದು ಈ ಹಿಂದೆ ಗವಾಸ್ಕರ್ ಹೇಳಿದ್ದ ಧಾಟಿಯಲ್ಲೇ ಹೇಳುತ್ತಾರೆ. ಬಳಿಕ ಪ್ರವಾಸ ಸೇವಾ ಆ್ಯಪ್ ಕುರಿತು ಮಾಹಿತಿ ನೀಡುತ್ತಾರೆ. ಈ ಜಾಹಿರಾತು ಹಾಸ್ಯಾಸ್ಪದವಾಗಿದ್ದರೂ ಪಂತ್ ಗವಾಸ್ಕರ್ ಅವರ ಆ Stupid, Stupid, Stupid ಟೀಕೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತದೆ.