2024ರ ಮಹಿಳಾ ಪ್ರೀಮಿಯರ್ ಲೀಗ್ (WPL) ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 2026ರ ಮೆಗಾ ಹರಾಜಿಗೂ ಮುನ್ನ 4 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. 2024ರ WPL ನಲ್ಲಿ ಟ್ರೋಫಿ ಗೆದ್ದ ನಂತರ, ಸ್ಮೃತಿ ಮಂಧಾನ ನೇತೃತ್ವದ ತಂಡವು ಇತ್ತೀಚಿನ ಆವೃತ್ತಿಯ ಟೂರ್ನಮೆಂಟ್‌ನಲ್ಲಿ 4ನೇ ಸ್ಥಾನದಲ್ಲಿ ಅಭಿಯಾನ ಮುಗಿಸಿತು. ಮೆಗಾ ಹರಾಜನ್ನು ವಿರೋಧಿಸಿದ ತಂಡಗಳಲ್ಲಿ RCB ಕೂಡ ಒಂದಾಗಿದ್ದು, ಇದೀಗ ತಮ್ಮ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ರಿಲೀಸ್ ಮಾಡಿದೆ.
WPL 2026ಕ್ಕಾಗಿ RCB ಉಳಿಸಿಕೊಂಡ ಆಟಗಾರ್ತಿಯರು
ರಿಟೆನ್ಶನ್ 1 – ಸ್ಮೃತಿ ಮಂಧಾನ (₹3.50 ಕೋಟಿ)
ರಿಟೆನ್ಶನ್ 2 – ರಿಚಾ ಘೋಷ್ (₹2.75 ಕೋಟಿ)
ರಿಟೆನ್ಶನ್ 3 – ಎಲಿಸ್ ಪೆರ್ರಿ (₹2 ಕೋಟಿ)
ರಿಟೆನ್ಶನ್ 4 – ಶ್ರೇಯಾಂಕಾ ಪಾಟೀಲ್ (₹60 ಲಕ್ಷ)
ಉಳಿದಿರುವ ಹಣ: ₹6.15 ಕೋಟಿ
2024ರಲ್ಲಿ ತಂಡವನ್ನು ಚೊಚ್ಚಲ ಟ್ರೋಫಿಗೆ ಮುನ್ನಡೆಸಿದ ನಂತರ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಅತ್ಯಧಿಕ ಮೊತ್ತಕ್ಕೆ ಉಳಿಸಿಕೊಳ್ಳಲಾಗಿದೆ. ವಿಶ್ವಕಪ್ ವಿಜೇತ ತಂಡದ ಸದಸ್ಯೆ ರಿಚಾ ಘೋಷ್ ಅವರಲ್ಲದೆ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರನ್ನು ಉಳಿಸಿಕೊಂಡಿದ್ದಾರೆ. ಆರ್‌ಸಿಬಿ ಬಿಡುಗಡೆ ಮಾಡಿರುವ ಸ್ಟಾರ್ ಆಟಗಾರ್ತಿಯರಲ್ಲಿ ಆಶಾ ಶೋಭನಾ, ಸೋಫಿ ಡಿವೈನ್, ರೇಣುಕಾ ಸಿಂಗ್ ಠಾಕೂರ್, ಸೋಫಿ ಮೊಲಿನೆಕ್ಸ್ ಸೇರಿದ್ದಾರೆ. ಆರ್‌ಸಿಬಿ ₹6.15 ಕೋಟಿಗಳೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಒಂದು ರೈಟ್ ಟು ಮ್ಯಾಚ್ ಕಾರ್ಡ್ ಹೊಂದಿದೆ.
RCB ಬಿಡುಗಡೆ ಮಾಡಿದ ಆಟಗಾರರು
ಸಬ್ಬಿನೇನಿ ಮೇಘನಾ, ಜಾರ್ಜಿಯಾ ವೇರ್‌ಹ್ಯಾಮ್ (ವಿದೇಶ), ಆಶಾ ಶೋಭನಾ, ಸೋಫಿ ಡಿವೈನ್ (ವಿದೇಶ), ರೇಣುಕಾ ಸಿಂಗ್ ಠಾಕೂರ್, ಸೋಫಿ ಮೊಲಿನೆಕ್ಸ್ (ವಿದೇಶ), ಏಕ್ತಾ ಬಿಶ್ತ್, ಕೇಟ್ ಕ್ರಾಸ್ (ವಿದೇಶ), ಕನಿಕಾ ಅಹುಜಾ, ಡ್ಯಾನಿ ವ್ಯಾಟ್ (ವಿದೇಶ), ಪ್ರೇಮಾ ರಾವತ್, ವಿಜೆ ಜೋಶಿತಾ, ಜಾಗ್ರವಿ ಪವಾರ್.
WPL ಮೆಗಾ ಹರಾಜು ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿದ್ದು, ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ ಎಂದು ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ. ಹರಾಜು ಪ್ರಕ್ರಿಯೆಯು ನಗರದ ವಿಮಾನ ನಿಲ್ದಾಣದ ಸಮೀಪವಿರುವ ಏರೋಸಿಟಿಯಲ್ಲಿರುವ ಹೋಟೆಲ್‌ನಲ್ಲಿ ನಡೆಯಲಿದೆ.