ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮಹಿಳಾ ವಿಶ್ವಕಪ್ ಫೈನಲ್ ಗೆದ್ದ ಡಿವೈ ಪಾಟೀಲ್ ಕ್ರೀಡಾಂಗಣದ ಮಧ್ಯದಲ್ಲಿ ಸ್ಮೃತಿ ಮಂಧಾನಾ ಅವರಿಗೆ ಜನಪ್ರಿಯ ಗಾಯಕ ಪಲಾಶ್ ಮುಚ್ಚಲ್ ಸರ್ ಪ್ರೈಸ್' ಪ್ರಪೋಸ್ ಮಾಡಿದ್ದಾರೆ.
ಸ್ಮೃತಿಯ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಕ್ರೀಡಾಂಗಣದ ಮಧ್ಯಕ್ಕೆ ಕರೆದೊಯ್ದು ಉಂಗುರ ನೀಡುವ ಮೂಲಕ ಅವರಿಗೆ ಬಿಗ್ ಸರ್ ಪ್ರೈಸ್ ನೀಡಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋವನ್ನು ಪಲಾಶ್ ಮುಚ್ಚಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪಲಾಶ್ ಮುಚ್ಛಿಲ್ ಅವರು ಸ್ಮೃತಿ ಮಂಧಾನ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಡಿವೈ ಪಾಟೀಲ್ ಕ್ರೀಡಾಂಗಣದೊಳಗೆ ಕರೆ ತರುವುದರೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ಮೈದಾನದ ಮಧ್ಯ ಭಾಗಕ್ಕೆ ಬಂದಾಗ ಸ್ಮೃತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗುತ್ತದೆ.
ತಕ್ಷಣವೇ ಪಲಾಶ್ ಮಂಡಿಯೂರಿ ವಜ್ರದ ಉಂಗುರವನ್ನು ಸ್ಮೃತಿ ಕೈಬೆರಳಿಗೆ ಹಾಕುವುದರೊಂದಿಗೆ ಪ್ರಪೋಸ್ ಮಾಡುತ್ತಾರೆ. ಬಳಿಕ ಸಂತೋಷದಿಂದ ಕಣ್ಣೀರು ಹಾಕುವ ಸ್ಮೃತಿ ಮಂಧಾನ ಖುಷಿಯಿಂದ ತಬ್ಬಿಕೊಳ್ಳುತ್ತಾರೆ. ಅವರು ಕೂಡಾ ಪಲಾಶ್ ಕೈಗೆ ಉಂಗುರ ಹಾಕುತ್ತಾರೆ. ಈ ವೇಳೆ ಅವರ ಬಂಧುಮಿತ್ರರು ಮೈದಾನಕ್ಕೆ ಆಗಮಿಸಿ ಶುಭಾಶಯಗಳನ್ನು ತಿಳಿಸುತ್ತಾರೆ. ಇಬ್ಬರೂ ತಮ್ಮ ಎಂಗೇಜ್ ಮೆಂಟ್ ರಿಂಗ್ ಅನ್ನು ಪ್ರದರ್ಶಿಸುವುದರೊಂದಿಗೆ ಈ ವಿಡಿಯೋ ಕೊನೆಗೊಳ್ಳುತ್ತದೆ.
ಸ್ಮೃತಿ ಮತ್ತು ಪಲಾಶ್ ನವೆಂಬರ್ 23 ರ ಭಾನುವಾರದಂದು ವಿವಾಹವಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅವರಿಗೆ ಬರೆದ ಅಭಿನಂದನಾ ಪತ್ರದಲ್ಲಿ ತಾರಾ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.