ಹೈದರಾಬಾದ್: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಅಜೇಯ 148 ರನ್ ಗಳಿಸುವ ಮೂಲಕ ಅಭಿಷೇಕ್ ಶರ್ಮಾ ಎರಡು ದಾಖಲೆಗಳನ್ನು ಬರೆದಿದ್ದಾರೆ. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಇದು T20 ಕ್ರಿಕೆಟ್‌ನಲ್ಲಿ ಜಂಟಿ ಮೂರನೇ ವೇಗದ ಅರ್ಧಶತಕವಾಗಿದೆ. ಅಲ್ಲದೆ, T20 ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಜಂಟಿ ಎರಡನೇ ವೇಗದ ಅರ್ಧಶತಕವಾಗಿದೆ.
ಹೈದಾರಾಬಾದ್ನ ಜಿಮ್ಖಾನಾ ಮೈದಾನದಲ್ಲಿ ನಡೆದ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಪಂಜಾಬ್ ಹಾಗೂ ಬಂಗಾಳ ತಂಡಗಳು ಮುಖಾಮುಖಿಯಾಗಿದ್ದವು.
ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಪಂಜಾಬ್ ಪರ ಒಟ್ಟು 16 ಸಿಕ್ಸರ್‌ಗಳು ಮತ್ತು ಎಂಟು ಬೌಂಡರಿಗಳನ್ನು ಬಾರಿಸಿದರು. ಆರಂಭಿಕ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ ಅವರೊಂದಿಗೆ 13 ಓವರ್‌ಗಳಲ್ಲಿ 205 ರನ್‌ಗಳ ಬೃಹತ್ ಜೊತೆಯಾಟ ನಡೆಸಿ ತಂಡಕ್ಕೆ ಬಲವಾದ ವೇದಿಕೆಯನ್ನು ಒದಗಿಸಿದರು.
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯ 2020-21 ಆವೃತ್ತಿಯಲ್ಲಿ ಮೇಘಾಲಯ ಪರ ಪುನೀತ್ ಬಿಶ್ತ್ ಮಿಜೋರಾಂ ವಿರುದ್ಧ ನಡೆದ ಪಂದ್ಯದಲ್ಲಿ 17 ಸಿಕ್ಸರ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಅಭಿಷೇಕ್ ಶರ್ಮಾ 16 ಸಿಕ್ಸರ್‌ಗಳ ಮೂಲಕ ಎರಡನೇ ಸ್ಥಾನ ಗಳಿಸಿದ್ದಾರೆ.
ಅಭಿಷೇಕ್ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಮ್ಮ ಮಾರ್ಗದರ್ಶಕ ಮತ್ತು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತದ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಆಕಾಶ್ ದೀಪ್ ಅವರನ್ನೊಳಗೊಂಡ ಬಂಗಾಳದ ವೇಗದ ದಾಳಿಯ ವಿರುದ್ಧ ಅಭಿಷೇಕ್ ಚುರುಕಾಗಿ ಆಡಿದರು. ಅವರು ಕೇವಲ ಒಂದು ಡಾಟ್ ಬಾಲ್ ಎದುರಿಸಿದರು ಮತ್ತು 12 ಎಸೆತಗಳಲ್ಲಿ ಐದು ಸಿಕ್ಸರ್‌ಗಳು ಮತ್ತು ಐದು ಅಷ್ಟೇ ಬೌಂಡರಿಗಳನ್ನು ಬಾರಿಸಿ ವೇಗದ ಅರ್ಧಶತಕ ಗಳಿಸಿದರು.
ಪುರುಷರ ಟಿ20ಯಲ್ಲಿ ಯಾವುದೇ ಭಾರತೀಯ ಆಟಗಾರ ಗಳಿಸಿದ ವೇಗದ ಅರ್ಧಶತಕದ ದಾಖಲೆ ಸದ್ಯ ಅಶುತೋಷ್ ಶರ್ಮಾ ಅವರ ಹೆಸರಿನಲ್ಲಿದೆ. ಅವರು 2023-24ರಲ್ಲಿ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್ ಪರ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.
ಪುರುಷರ ಟಿ20ಯಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್, ಜಜೈ ಮತ್ತು ಚೌಹಾಣ್ ಅವರ ಜೊತೆ ಅಭಿಷೇಕ್ ಸೇರಿದ್ದಾರೆ.
ಟಿ20ಗಳಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ನೇಪಾಳದ ದೀಪೇಂದ್ರ ಸಿಂಗ್ ಐರೀ ಅವರ ಹೆಸರಿನಲ್ಲಿದೆ. ಅವರು 2023ರ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಮಂಗೋಲಿಯಾ ವಿರುದ್ಧ ಕೇವಲ ಒಂಬತ್ತು ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದರು.