2025ರ ಏಷ್ಯಾ ಕಪ್ ಸಮಯದಲ್ಲಿ ಭಾರತದ ವಿರುದ್ಧದ ನಿಲುವಿಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮತ್ತು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರನ್ನು ಆ ದೇಶದ ಸರ್ಕಾರ ಸನ್ಮಾನಿಸಲಿದೆ ಎಂದು ಎನ್‌ಡಿಟಿವಿ ಮೂಲಗಳು ದೃಢಪಡಿಸಿವೆ. ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದ ನಂತರ ನಖ್ವಿ ಅವರು ನಡೆದುಕೊಂಡಿದ್ದ ರೀತಿಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದರೂ, ಅದೇ ಕಾರಣಕ್ಕೆ ಅವರನ್ನು ಪಾಕಿಸ್ತಾನದಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯೋಜಿಸಲಾಗಿದ್ದು, ಅಲ್ಲಿ ನಖ್ವಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ. ಆದರೆ, ಕಾರ್ಯಕ್ರಮದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ನಖ್ವಿ ಅವರಿಂದ ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದ ನಂತರ, ನಖ್ವಿ ಏಷ್ಯಾ ಕಪ್ ಟ್ರೋಫಿ ಮತ್ತು ವಿಜೇತ ತಂಡದ ಆಟಗಾರರ ಪದಕಗಳನ್ನು ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋದರು. ಬಳಿಕ ಟ್ರೋಫಿ ಮತ್ತು ಪದಕಗಳನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಲಾಗಿದೆ. ಆದರೆ, ಅವುಗಳನ್ನು ಯಾವಾಗ ಮತ್ತು ಹೇಗೆ ಭಾರತಕ್ಕೆ ತಲುಪಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕ್ರಿಕೆಟ್ ವಲಯ ನಖ್ವಿಯವರ ಈ ನಡೆಯನ್ನು ಖಂಡಿಸಿದ್ದರೂ, ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧ ಇಂತಹ ನಿಲುವನ್ನು ತೆಗೆದುಕೊಂಡಿದ್ದಕ್ಕಾಗಿ ಅವರು ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ. ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯೋಜಿಸಲಾಗಿದ್ದು, ಅಲ್ಲಿ ನಖ್ವಿ ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುವುದು ಎಂದು ವರದಿಯಾಗಿದೆ.
ಪಾಕಿಸ್ತಾನದ ಮಾಧ್ಯಮ ಸಂಸ್ಥೆ 'ದಿ ನೇಷನ್' ವರದಿ ಪ್ರಕಾರ, ಸಿಂಧ್ ಮತ್ತು ಕರಾಚಿ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ಗಳ ಅಧ್ಯಕ್ಷರಾದ ವಕೀಲ ಗುಲಾಮ್ ಅಬ್ಬಾಸ್ ಜಮಾಲ್ ಅವರು ನಖ್ವಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ. ಭಾರತದೊಂದಿಗೆ ರಾಜಕೀಯ ಮತ್ತು ಕ್ರೀಡಾ ಉದ್ವಿಗ್ನತೆಗಳು ಉತ್ತುಂಗದಲ್ಲಿದ್ದ ಈ ಸಮಯದಲ್ಲಿ ನಖ್ವಿಯವರ ಕ್ರಮಗಳು 'ರಾಷ್ಟ್ರದ ಹೆಮ್ಮೆಯನ್ನು ಪುನಃಸ್ಥಾಪಿಸಿವೆ' ಎಂದು ಜಮಾಲ್ ಹೇಳಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಂಪೂರ್ಣ ಟ್ರೋಫಿ ನೀಡಲು ಸಾಧ್ಯವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದೆ ಎಂದು NDTV ಗೆ ತಿಳಿದುಬಂದಿದೆ. ಆದರೂ ನಖ್ವಿ ಕ್ಷಮೆಯಾಚಿಸಲಿಲ್ಲ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷರೂ ಆಗಿರುವ ನಖ್ವಿ, 'ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ನಾನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೆ ಕ್ಷಮೆಯಾಚಿಸಲಿಲ್ಲ ಮತ್ತು ಎಂದಿಗೂ ಕ್ಷಮೆಯಾಚಿಸುವುದಿಲ್ಲ' ಎಂದು X ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಭಾರತ ತಂಡ ದುಬೈನಲ್ಲಿರುವ ಎಸಿಸಿ ಕಚೇರಿಗೆ ಭೇಟಿ ನೀಡಿ, ಟ್ರೋಫಿಯನ್ನು ವೈಯಕ್ತಿಕವಾಗಿ ಪಡೆಯುವಂತೆ ನಖ್ವಿ ಹೇಳಿದ್ದಾರೆ.