ಕೊಲಂಬೋ: ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ರಿಷಭ್ ಪಂತ್ 63 ರನ್ ಗಳಿಸುವ ಮೂಲಕ ಭಾರತದ ಪರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 503 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ದೇವದತ್ ಪಡಿಕ್ಕಲ್ ಮತ್ತು ದ್ರುವ್ ಜುರೇಲ್ ಶತಕ ಬಾರಿಸಿದರೆ, ಇನ್ನಿಬ್ಬರು ಅಂದರೆ ಪಂತ್ ಮತ್ತು ನಾಯಕ ಶುಭ್ ಮನ್ ಗಿಲ್ ಅರ್ಧಶತಕ ಗಳಿಸಿದರು.
ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಪಂತ್, ನಾಯಕ ಗಿಲ್ ಅವರ ದಾಖಲೆಯನ್ನು ಮುರಿದರು. ಪಂತ್ ಮತ್ತು ಗಿಲ್ ಇಬ್ಬರೂ ಡಬ್ಲ್ಯೂಟಿಸಿಯಲ್ಲಿ ಇದುವರೆಗೆ ತಲಾ 42 ಪಂದ್ಯಗಳನ್ನು ಆಡಿದ್ದಾರೆ. ಆದಾಗ್ಯೂ ಪಂತ್, ಗಿಲ್ಗಿಂತ ಎರಡು ಕಡಿಮೆ ಇನ್ನಿಂಗ್ಸ್ ಆಡಿದ್ದಾರೆಯಾದರೂ ಗಿಲ್ಗಿಂತ ಹೆಚ್ಚು ರನ್ ಗಳಿಸಿದ್ದಾರೆ.
ಗಿಲ್ 76 ಇನ್ನಿಂಗ್ಸ್ಗಳಲ್ಲಿ 2,917 ರನ್ ಬಾರಿಸಿದ್ದಾರೆ. ಮತ್ತೊಂದೆಡೆ, ಪಂತ್ 74 ಇನ್ನಿಂಗ್ಸ್ ಗಳಲ್ಲಿ 2,948 ರನ್ ಗಳಿಸುವ ಮೂಲಕ ಗಿಲ್ರನ್ನು ಹಿಂದಿಕ್ಕಿದ್ದಾರೆ. ಪಂತ್ ಮತ್ತು ಗಿಲ್ ನಂತರ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರೋಹಿತ್ 2,716 ರನ್ ಗಳಿಸಿದ್ದರೆ, ಜಡೇಜಾ 2,675 ರನ್ ಬಾರಿಸಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ 2,617 ರನ್ ಕಲೆಹಾಕಿದ್ದಾರೆ.
ರೋಹಿತ್ ಮತ್ತು ವಿರಾಟ್ ಈಗ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ರೋಹಿತ್ ಅವರನ್ನು ಹಿಂದಿಕ್ಕುವ ಅವಕಾಶ ಜಡೇಜಾ ಅವರಿಗಿದೆ. ಏತನ್ಮಧ್ಯೆ, ಪಂತ್ ಮತ್ತು ಗಿಲ್ ನಡುವಿನ ಡಬ್ಲ್ಯೂಟಿಸಿ ರನ್ ರೇಸ್ ಆಸಕ್ತಿದಾಯಕವಾಗಲಿದೆ. ಪಂತ್ ಖಂಡಿತವಾಗಿಯೂ ಮುನ್ನಡೆ ಸಾಧಿಸಿದ್ದಾರೆ, ಆದರೆ ಗಿಲ್ ದೊಡ್ಡ ಇನ್ನಿಂಗ್ಸ್‌ನೊಂದಿಗೆ ಪಂತ್ರನ್ನು ಮತ್ತೆ ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.
ಗಾಯದ ನಡುವೆಯೂ ಅಬ್ಬರಿಸಿದ ಪಂತ್
ಮೊದಲ ದಿನ ಲಹಿರು ಕುಮಾರ ಅವರ ಬೌನ್ಸರ್ ಕೈಗೆ ಬಡಿದ ಹಿನ್ನೆಲೆಯಲ್ಲಿ ಪಂತ್ ರಿಟೈರ್ಡ್ ಹರ್ಟ್ ಆಗಿದ್ದರು. ಹೀಗಾಗಿ ಎರಡನೇ ದಿನ ಅವರು ಮತ್ತೆ ಬ್ಯಾಟಿಂಗ್‌ಗೆ ಇಳಿಯುತ್ತಾರೆಯೇ ಎಂಬ ಅನುಮಾನವಿತ್ತು. ಆದರೆ ಪಂತ್ ಗಾಯದ ನೋವನ್ನು ಲೆಕ್ಕಿಸದೆ ಬ್ಯಾಟಿಂಗ್‌ಗೆ ಮರಳಿದರು.
63 ರನ್‌ಗಳ ಆಕ್ರಮಣಕಾರಿ ಇನಿಂಗ್ಸ್ ಮೂಲಕ ಭಾರತಕ್ಕೆ ಬಲ ತುಂಬಿದರು. ಅವರ ಇನಿಂಗ್ಸ್ ಅಂತ್ಯಗೊಂಡಿದ್ದು ಕೇಶರ ನುವಾಂತ ಅವರ ಎಸೆತದಲ್ಲಿ.
ಗಿಲ್ ಕ್ರಿಸ್ಟ್ ದಾಖಲೆಯೂ ಪತನ
ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್ ಆಗಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಆಡಂ ಗಿಲ್‌ಕ್ರಿಸ್ಟ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದರು.