ಚೆನ್ನೈ: ಅಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 219 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ಮಿಂಚಿನ ಆರಂಭ ಪಡೆದು ಮೊದಲ ಓವರ್‌ನಲ್ಲೇ ದಾಖಲೆ 23 ರನ್ ಕಲೆಹಾಕಿ 22 ವರ್ಷಗಳ ಹಳೆಯ ದಾಖಲೆಯನ್ನು ಕೇವಲ 6 ಎಸೆತಗಳಲ್ಲಿ ಮುರಿಯಿತು.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 219 ರನ್ ಗುರಿ ಬೆನ್ನತ್ತಿದ ಭಾರತ ತಂಡ ಅಮೋಘ ಆರಂಭ ಕಂಡು, ಮೊದಲ ಓವರ್‌ನಲ್ಲೇ ದಾಖಲೆಯ 23 ರನ್ ಕಲೆಹಾಕಿತು.
ಹೀಗಾಗಿ 219 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ ತನ್ನ ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ 5 ರನ್ ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿತು.
ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ 5 ರನ್
ಇನ್ನು ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಆರಂಭಿಸುವ ಮುನ್ನವೇ 5 ರನ್ ಗಳಿಸಿತ್ತು. ಆಫ್ಘಾನಿಸ್ತಾನ ಬ್ಯಾಟಿಂಗ್ ವೇಳೆ ಅಫ್ಘಾನಿಸ್ತಾನ ನಾಯಕ ಹಷ್ಮತುಲ್ಲಾ ಶಾಹಿದಿ ತಮ್ಮ ಇನ್ನಿಂಗ್ಸ್ ವೇಳೆ ಪದೇ ಪದೇ ಪಿಚ್‌ನ ಸಂರಕ್ಷಿತ ಪ್ರದೇಶದ ಮೇಲೆ ಓಡಿದ ಕಾರಣ ಅಫ್ಘಾನಿಸ್ತಾನಕ್ಕೆ ಐದು ರನ್‌ಗಳ ದಂಡ ವಿಧಿಸಲಾಗಿತ್ತು. ಅದರ ಫಲವಾಗಿ ಭಾರತ ತನ್ನ ಇನ್ನಿಂಗ್ಸ್ ಆರಂಭಿಸುವ ಮುನ್ನವೇ 5 ರನ್‌ಗಳನ್ನು ಖಾತೆಯಲ್ಲಿ ಹೊಂದಿತ್ತು.
22 ವರ್ಷಗಳ ಹಳೆಯ ದಾಖಲೆ ಕೇವಲ 6 ಎಸೆತಗಳಲ್ಲಿ ಮುರಿದ ಭಾರತ
ಇನ್ನು ಆಫ್ಘಾನಿಸ್ತಾನ ನೀಡಿದ 219 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಭಾರತ ಮೊದಲ ಓವರ್ ನಲ್ಲೇ 23 ರನ್ ಕಲೆಹಾಕಿ 22 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಿತು. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ತಂಡ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.
ಇದಕ್ಕೂ ಮೊದಲು 2004ರಲ್ಲಿ ಕೊಲಂಬೋದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 22 ರನ್ ಕಲೆಹಾಕಿತ್ತು. ಇದು ಇಷ್ಟು ದಿನ ಭಾರತ ಮೊದಲ ಓವರ್ ನಲ್ಲಿ ಕಲೆಹಾಕಿದ್ದ ಗರಿಷ್ಠ ಮೊತ್ತವಾಗಿತ್ತು. ಇದಾದ ಬಳಿಕ 2020ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಓವರ್ ನಲ್ಲೇ 20 ರನ್ ಕಲೆಹಾಕಿತ್ತು.
6 ಎಸೆತದಲ್ಲಿ 23 ರನ್
ಆಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಮೊದಲ ಓವರ್ ಬೌಲಿಂಗ್ ಮಾಡಿದ್ದು, ಅದು ಅಫ್ಘಾನಿಸ್ತಾನಕ್ಕೆ ದುಸ್ವಪ್ನವಾಗಿ ಪರಿಣಮಿಸಿತು. ಆಫ್ಘಾನಿಸ್ತಾನಕ್ಕೆ ನೀಡಿದ ಪೆನಾಲ್ಟಿ ಪರಿಣಾಮ ಭಾರತ 5/0 ರಿಂದ ತನ್ನ ಇನ್ನಿಂಗ್ಸ್ ಆರಂಭಿಸಿತು. ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಎಡಗೈ ಬ್ಯಾಟರ್ ಮೊದಲಿಗೆ ಎರಡು ರನ್ ಗಳಿಸಿ, ಬಳಿಕ ಆಫ್ ಸೈಡ್ ಮೂಲಕ ಬೌಂಡರಿ ಬಾರಿಸಿದರು. ಅದಾದ ಬಳಿಕ ಒಮರ್ಜಾಯ್ ತಮ್ಮ ನಿಯಂತ್ರಣ ಕಳೆದುಕೊಂಡರು. ಅವರು ವೈಡ್ ಎಸೆತಗಳ ಜೊತೆಗೆ ಎರಡು ಬಾರಿ ನೋ-ಬಾಲ್ ಎಸೆದರು.
ಫ್ರೀ-ಹಿಟ್ ಅವಕಾಶಗಳನ್ನು ಜೈಸ್ವಾಲ್ ಸಮರ್ಥವಾಗಿ ಬಳಸಿಕೊಂಡರು. ಅವರು ಲಾಂಗ್-ಆಫ್ ಮೇಲಿಂದ ಒಂದು ಬೌಂಡರಿ ಬಾರಿಸಿದರೆ, ನಂತರ ಮತ್ತೊಂದು ಬೌಂಡರಿಯನ್ನು ಮಿಡ್-ಆಫ್ ದಾಟಿಸಿ ಗಳಿಸಿದರು. ಒಂದು ಹಂತದಲ್ಲಿ ಅವರು ಪುಲ್ ಶಾಟ್ ಆಡಿದ ಚೆಂಡು ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ಆದರೂ, ಅದು ನೋ-ಬಾಲ್ ಆಗಿದ್ದರಿಂದ ಔಟ್ ಎಂದು ಪರಿಗಣಿಸಲಿಲ್ಲ. ಓವರ್‌ನ ಕೊನೆಯ ಭಾಗದಲ್ಲಿ ಜೈಸ್ವಾಲ್ ಮತ್ತೊಂದು ಎಸೆತವನ್ನು ಕಟ್ ಮಾಡಿ ಬೌಂಡರಿಗೆ ಅಟ್ಟಿದರು. ಹೀಗಾಗಿ ಕೇವಲ ಆರು ಅಧಿಕೃತ ಎಸೆತಗಳಲ್ಲೇ ಭಾರತದ ಮೊತ್ತ 23 ರನ್‌ಗಳಿಗೆ ಏರಿತು.