ನ್ಯೂ ಚಂಡೀಗಢ: ಭಾರತದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಯ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹೊರತಾಗಿಯೂ ಕೇವಲ 3 ರನ್ ಗಳ ಅಂತರದಲ್ಲಿ ವಿಶ್ವದಾಖಲೆಯೊಂದನ್ನು ಮಿಸ್ ಮಾಡಿಕೊಂಡರು.
ಬುಧವಾರ ಮುಲ್ಲನ್ ಪುರದ ನ್ಯೂ PCA ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ IPL 2026 ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಸ್ಫೋಟಕ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ ಕೇವಲ 3 ರನ್ ಗಳ ಅಂತರದಲ್ಲಿ ಭಾರೀ ದಾಖಲೆಯನ್ನು ಕೈಚೆಲ್ಲಿದರು.
Rajasthan Royals ತಂಡದ ಯುವ ಆರಂಭಿಕ ಬ್ಯಾಟರ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 97 ರನ್ ಸಿಡಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಶತಕ ತಪ್ಪಿಸಿಕೊಂಡರು. ಮಾತ್ರವಲ್ಲದೇ ಐಪಿಎಲ್ ಇತಿಹಾಸದ ವೇಗದ ಶತಕ ದಾಖಲೆಯನ್ನು ಮುರಿಯುವ ಸದಾವಕಾಶವನ್ನೂ ಕೈ ಚೆಲ್ಲಿದರು.
ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಬರೊಬ್ಬರಿ 12 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 97 ರನ್ ಸಿಡಿಸಿದ್ದರು. ಆದರೆ ಪ್ರಫುಲ್ ಹಿಂಗೆ ಬೌಲಿಂಗ್ ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಸ್ಮರಣ್ ರವಿಚಂದ್ರನ್ ಗೆ ಕ್ಯಾಚ್ ನೀಡಿ ಔಟಾದರು. ಔಟಾಗುವ ಮೊದಲು ಕೊನೆಯ ಎರಡು ಅಥವಾ ಮೂರು ಎಸೆತಗಳಲ್ಲಿ ವೈಭವ್ 3 ರನ್ ಸಿಡಿಸಿದ್ದರೆ, IPL ಇತಿಹಾಸದ ಅತಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ಮುರಿಯುತ್ತಿದ್ದರು.
ಪ್ರಸ್ತುತ ಈ ದಾಖಲೆ “ಯೂನಿವರ್ಸಲ್ ಬಾಸ್” Chris Gayle ಹೆಸರಿನಲ್ಲಿ ಇದೆ. ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಈ ಸಾಧನೆ ಮಾಡಿದ್ದರು. ವೈಭವ್ ಸೂರ್ಯವಂಶಿ ಆ ದೀರ್ಘಕಾಲದ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದರಾದರೂ 3 ರನ್ ಗಳ ಅಂತರದಲ್ಲಿ ಈ ದಾಖಲೆ ಮಿಸ್ ಮಾಡಿಕೊಂಡರು.
ಸ್ಫೋಟಕ ಆರಂಭ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಹತ್ವದ ನಾಕೌಟ್ ಪಂದ್ಯದಲ್ಲಿ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್‌ಗೆ ಕನಸಿನ ಆರಂಭ ಒದಗಿಸಿದರು. 8ನೇ ಓವರ್‌ನ ಕೊನೆಯ ಎಸೆತದಲ್ಲಿ ಪ್ರಫುಲ್ ಹಿಂಗೆ ಬೌಲಿಂಗ್‌ನಲ್ಲಿ ಸೂರ್ಯವಂಶಿ ಔಟಾಗುವಷ್ಟರಲ್ಲಿ RR ತಂಡ ಕೇವಲ 8 ಓವರ್‌ಗಳಲ್ಲಿ 125/1 ರನ್‌ಗಳ ಭರ್ಜರಿ ಸ್ಥಿತಿಯಲ್ಲಿ ಇತ್ತು.
ವೈಭವ್ ಸೂರ್ಯವಂಶಿ 334.48ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಯುವ ಬ್ಯಾಟರ್ ತೋರಿದ ಅದ್ಭುತ ಬ್ಯಾಟಿಂಗ್ ಪ್ರತಿಭೆಗೆ ಇಂಟರ್ನೆಟ್ ಬಳಕೆದಾರರು ಭಾರೀ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.