ಮಂಗಳವಾರ ಧರ್ಮಶಾಲಾದಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು 92 ರನ್‌ಗಳಿಂದ ಸೋಲಿಸುವ ಮೂಲಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸತತ ಎರಡನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಲಗ್ಗೆ ಇಟ್ಟಿತು. ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಆರ್‌ಸಿಬಿ, ನಾಯಕ ರಜತ್ ಪಾಟೀದಾರ್ ಅವರ 33 ಎಸೆತಗಳಲ್ಲಿ ಅಜೇಯ 93 ರನ್‌ಗಳ ಅಬ್ಬರದ ಬ್ಯಾಟಿಂಗ್ ಮತ್ತು ಪವರ್‌ಪ್ಲೇ ಒಳಗೆ ಎದುರಾಳಿಗಳ ಅಗ್ರ ಕ್ರಮಾಂಕವನ್ನು ಛಿದ್ರಗೊಳಿಸಿದ ಬಲಿಷ್ಠ ವೇಗದ ದಾಳಿಯ ನೆರವಿನಿಂದ ಭರ್ಜರಿ ಜಯಗಳಿಸಿತು. ಆರ್‌ಸಿಬಿ ಫೈನಲ್‌ಗೆ ಅರ್ಹತೆ ಪಡೆದಿರುವುದನ್ನು ನೋಡಿದ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಕೋರಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಐದು ವಿಕೆಟ್ ಕಳೆದುಕೊಂಡು 254 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಪಾಟೀದಾರ್ ಈ ಆವೃತ್ತಿಯ ಅತ್ಯಂತ ವಿನಾಶಕಾರಿ ಇನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು. ಇನಿಂಗ್ಸ್‌ನ ಆರಂಭದಲ್ಲಿಯೇ ಬೌಂಡರಿಗಳನ್ನು ಸುಲಭವಾಗಿ ಗಳಿಸಿದರು. ಆರ್‌ಸಿಬಿ ನಾಯಕ ಡೆತ್ ಓವರ್‌ಗಳಲ್ಲಿ ಜಿಟಿ ಬೌಲರ್‌ಗಳ ಬೆವರಿಳಿಸಿದರು. ತಂಡವು 250 ರನ್‌ಗಳ ಗಡಿ ದಾಟುವಂತೆ ಮಾಡಿದರು.
'ಧರ್ಮಶಾಲಾದಲ್ಲಿ ಇಂದು ರಾತ್ರಿ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವಿಗಾಗಿ ಆರ್‌ಸಿಬಿಯ ನಮ್ಮ ದೊಡ್ಡ ಸಿಂಹಗಳಿಗೆ ಅಭಿನಂದನೆಗಳು. ನೀವು ಬೆಂಗಳೂರಿನ ಸಿಂಹಗಳಂತೆ ಜೋರಾಗಿ ಘರ್ಜಿಸಿದ್ದೀರಿ ಮತ್ತು ಹಾಲಿ ಚಾಂಪಿಯನ್‌ಗಳಾಗಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದೀರಿ' ಎಂದು ವಿಜಯ್ ಮಲ್ಯ ಎಕ್ಸ್‌ನಲ್ಲಿ ಬರೆದಿದ್ದಾರೆ.Qualifier 1: 'ನಾವು ನಿಮಗಾಗಿ ಬರುತ್ತಿದ್ದೇವೆ'; 33 ಎಸೆತಗಳಲ್ಲಿ 93 ರನ್ ಚಚ್ಚಿದ ರಜತ್ ಪಾಟೀದಾರ್, ಕಿಲ್ಲರ್ ಅಪ್ರೋಚ್ ಕುರಿತು ಮಾತು
ಗುಜರಾತ್ ಟೈಟಾನ್ಸ್ ತಂಡವು ಪಾಟೀದಾರ್ ಅವರ ಎರಡು ಬಾರಿ ಕ್ಯಾಚ್ ಕೈಬಿಟ್ಟಿತು. ನಂತರ ಅವರು ಒಂಬತ್ತು ಸಿಕ್ಸರ್‌ಗಳು ಮತ್ತು ಐದು ಬೌಂಡರಿಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ತಲೆಕೆಳಗಾಗಿಸಿದರು. ಆರ್‌ಸಿಬಿ ಕೊನೆಯ ಐದು ಓವರ್‌ಗಳಲ್ಲಿ 86 ರನ್‌ಗಳನ್ನು ಗಳಿಸಿ ಪಂದ್ಯದ ಸಂಪೂರ್ಣ ನಿಯಂತ್ರಣ ಸಾಧಿಸಿತು. ವಾಸ್ತವವಾಗಿ, ಅವರು ಕೊನೆಯ ಆರು ಓವರ್‌ಗಳಲ್ಲಿಯೇ 114 ರನ್‌ಗಳನ್ನು ಗಳಿಸಿದರು.
255 ರನ್ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್‌ಗೆ ಉತ್ತಮ ಆರಂಭದ ಅಗತ್ಯವಿತ್ತು. ಆದರೆ, ಫಾರ್ಮ್‌ನಲ್ಲಿದ್ದ ಇಬ್ಬರೂ ಆರಂಭಿಕ ಆಟಗಾರರು ಕಡಿಮೆ ರನ್ ಗಳಿಸಿದ್ದರಿಂದ ಪವರ್‌ಪ್ಲೇ ಒಳಗೆ ಅವರ ಭರವಸೆ ಭಗ್ನವಾಯಿತು.
ಜೇಕಬ್ ಡಫಿ (3/39) ಎಸೆತದಲ್ಲಿ ಶಾಟ್ ಹೊಡೆಯಲು ಪ್ರಯತ್ನಿಸುವಾಗ ಸಾಯಿ ಸುದರ್ಶನ್ ಅವರ ಬ್ಯಾಟ್ ಕೈಯಿಂದ ಜಾರಿ ಸ್ಟಂಪ್‌ಗೆ ಅಪ್ಪಳಿಸಿದ್ದರಿಂದ ಅವರು 14 ರನ್ ಗಳಿಸಿದ್ದಾಗ ದುರದೃಷ್ಠವಷಾತ್ ಔಟ್ ಆದರು.
ಅಂತಿಮವಾಗಿ, ಜಿಟಿ ತಂಡವು 162 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ತಂಡವು ಐದನೇ ಬಾರಿ ಫೈನಲ್‌ಗೆ (2009, 2011, 2016, 2025, 2026) ತಲುಪಿತು.