ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಶತಕ ಬಾರಿಸಿದರೂ ವ್ಯರ್ಥ: ಮೈದಾನದಲ್ಲಿ ಅಭಿಮಾನಿಗಳ ಮುಂದೆಯೇ ಬಾಬರ್‌ ಆಜಂಗೆ ಕೋಚ್ ಕ್ಲಾಸ್, ಮೌನಕ್ಕೆ ಶರಣಾದ ಪಾಕ್ ನಾಯಕ!

ಇತ್ತೀಚೆಗೆ ದಿ ಸೂಪರ್‌ ಓವರ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಬಾಬರ್‌ ಶತಕ ಗಳಿಸಲು ತೆಗೆದುಕೊಂಡ ಸಮಯವೇ ಪಾಕಿಸ್ತಾನದ ಸೋಲಿಗೆ ಕಾರಣವಾಯಿತು..

ಬಾಬರ್ ಆಜಂ ಮಕ್ಕು ಮಿಕ್ಕಿ ಆರ್ಥರ್
Srinivasa Murthy VN
Updated On : 28 Nov 2026, 11:14 am

ಲಾಹೋರ್: ಪಾಕಿಸ್ತಾನದ ಮಾಜಿ ಕೋಚ್‌ ಮಿಕ್ಕಿ ಆರ್ಥರ್‌, ತಂಡದ ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ಶತಕ ಬಾರಿಸಿದರೂ ತಂಡದ ಎಲ್ಲ ಆಟಗಾರರ ಎದುರೇ ಕಠಿಣ ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

ಈ ಘಟನೆಯಿಂದ ಬಾಬರ್‌ ಒಂದು ವಾರ ತಮ್ಮೊಂದಿಗೆ ಮಾತನಾಡಿರಲಿಲ್ಲ ಎಂದೂ ಆರ್ಥರ್‌ ಹೇಳಿದ್ದಾರೆ. 2016ರಿಂದ 2019ರವರೆಗೆ ಪಾಕಿಸ್ತಾನ ತಂಡದ ಮುಖ್ಯ ಕೋಚ್‌ ಆಗಿದ್ದ ಮಿಕ್ಕಿ ಆರ್ಥರ್‌, ಬಾಬರ್‌ ಆಜಂ ಅವರ ಆರಂಭಿಕ ಕ್ರಿಕೆಟ್‌ ದಿನಗಳಲ್ಲಿ ಅವರ ಆಟವನ್ನು ಹತ್ತಿರದಿಂದ ಗಮನಿಸಿದ್ದರು.

ಇತ್ತೀಚೆಗೆ ದಿ ಸೂಪರ್‌ ಓವರ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಬಾಬರ್‌ ಶತಕ ಗಳಿಸಲು ತೆಗೆದುಕೊಂಡ ಸಮಯವೇ ಪಾಕಿಸ್ತಾನದ ಸೋಲಿಗೆ ಕಾರಣವಾಯಿತು ಎಂದು ವಿವರಿಸಿದ್ದಾರೆ.

Advertisement

Advertisement

Also Read

Cricket: DSP ಸಿರಾಜ್ ಸ್ಥಾನಕ್ಕೂ ಕುತ್ತು? ಆಯ್ಕೆ ನಿರ್ಧಾರ ನಾಯಕ ಶುಭ್‌ಮನ್ ಗಿಲ್‌ಗೆ ಬಿಟ್ಟ ಕೋಚ್!

90ರಿಂದ 100 ರನ್‌ ತಲುಪಲು 15 ಎಸೆತ!

ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್‌ ಆಜಂ 90 ರನ್‌ಗಳಿಂದ 100 ರನ್‌ ತಲುಪಲು 15 ಎಸೆತಗಳನ್ನು ತೆಗೆದುಕೊಂಡಿದ್ದರು. ಅವರು ಶತಕ ಗಳಿಸಿದ ನಂತರದ ಎರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿದ್ದರು. ಆದರೆ, ಪಾಕಿಸ್ತಾನ ತಂಡ ಕೊನೆಯ ಓವರ್‌ನಲ್ಲಿ ಪಂದ್ಯ ಸೋತಿತ್ತು.

ಈ ಬಗ್ಗೆ ಮಾತನಾಡಿದ ಆರ್ಥರ್‌, “ತಂಡದಲ್ಲಿ ಆಟದ ವೇಗ ಕಡಿಮೆಯಾದಾಗ ಕೆಲವೊಮ್ಮೆ ಪ್ರಮುಖ ಆಟಗಾರನನ್ನೇ ಎಲ್ಲರ ಮುಂದೆ ಪ್ರಶ್ನಿಸಬೇಕಾಗುತ್ತದೆ. ಇದರಿಂದ ಅವರ ಆತ್ಮವಿಶ್ವಾಸಕ್ಕೆ ಸಣ್ಣ ಆಘಾತವಾಗಬಹುದು. ಆದರೆ, ತಂಡದಿಂದ ಉತ್ತಮ ಪ್ರದರ್ಶನ ಹೊರತರಲು ಅದು ಅಗತ್ಯವಾಗಿರುತ್ತದೆ” ಎಂದಿದ್ದಾರೆ.

ಒಂದು ವಾರ ಮಾತನಾಡದ ಬಾಬರ್

ಇನ್ನು “ನಾನು ಬಾಬರ್‌ನನ್ನು ಒಮ್ಮೆ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಪ್ರಶ್ನಿಸಿದ್ದೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ, ಆ ಘಟನೆಯ ನಂತರ ಒಂದು ವಾರ ಆತ ನನ್ನೊಂದಿಗೆ ಮಾತನಾಡಲಿಲ್ಲ” ಎಂದು ಹೇಳಿದ್ದಾರೆ.

“ಬಾಬರ್‌ ಶತಕ ಗಳಿಸಿದ್ದರು. ಆದರೆ, 90ರಿಂದ 100 ರನ್‌ ತಲುಪಲು 15 ಎಸೆತಗಳನ್ನು ತೆಗೆದುಕೊಂಡಿದ್ದರು. ಶತಕ ಗಳಿಸಿದ ನಂತರದ ಎರಡು ಎಸೆತಗಳಲ್ಲಿ ಸತತ ಸಿಕ್ಸರ್‌ ಬಾರಿಸಿದರು. ನಾವು ಕೊನೆಯ ಓವರ್‌ನಲ್ಲಿ ಸೋತೆವು. ಆ 15 ಎಸೆತಗಳ ಅವಧಿಯಲ್ಲಿ ಅವರು ಶತಕದತ್ತ ಗಮನಹರಿಸಿದ್ದರು ಎಂಬುದು ನನ್ನ ಅಭಿಪ್ರಾಯವಾಗಿತ್ತು. ಐದು ಎಸೆತಗಳಲ್ಲಿ ಶತಕ ಪೂರೈಸಿದ್ದರೆ, ಉಳಿದ 10 ಎಸೆತಗಳಲ್ಲಿ ಇನ್ನೂ 15 ರನ್‌ ಗಳಿಸಲು ಅವಕಾಶವಿತ್ತು. ಆಗ ನಾವು ಸುಲಭವಾಗಿ ಪಂದ್ಯ ಗೆಲ್ಲಬಹುದಿತ್ತು” ಎಂದು ಆರ್ಥರ್‌ ವಿವರಿಸಿದ್ದಾರೆ.

ಬಾಬರ್‌ನನ್ನು ತಂಡದ ಎದುರೇ ಪ್ರಶ್ನಿಸಿದಾಗ ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದ ಆಟಗಾರರೂ ಅಚ್ಚರಿಗೊಂಡಿದ್ದರು. ‘ಬಾಬರ್‌ನನ್ನೇ ಹೀಗೆ ಪ್ರಶ್ನಿಸುತ್ತೀರಾ?’ ಎಂಬ ಭಾವನೆ ಅವರಲ್ಲಿತ್ತು. ಆದರೆ, ಆ ಪಂದ್ಯ ಸೋಲಲು ಕಾರಣವಾದ ಅಂಶವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು ಎಂದು ಆರ್ಥರ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಶತಕ ಕಂಡು ಸಂದೇಶ ತಲುಪಿದ್ದಕ್ಕೆ ಖುಷಿಪಟ್ಟಿದ್ದ ಆರ್ಥರ್‌!

ಮಿಕ್ಕಿ ಆರ್ಥರ್‌ ನೀಡಿದ್ದ ಈ ಸಂದೇಶ ಬಾಬರ್‌ ಮೇಲೆ ಪರಿಣಾಮ ಬೀರಿತ್ತು. 2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಬಾಬರ್‌ ಅದ್ಭುತ ಶತಕ ಬಾರಿಸಿದ್ದರು. ಆ ಇನಿಂಗ್ಸ್‌ ಇಂದಿಗೂ ತಮ್ಮ ನೆನಪಿನಲ್ಲಿ ಉಳಿದಿದೆ ಎಂದು ಆರ್ಥರ್‌ ಹೇಳಿದ್ದಾರೆ.

“ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಬಾಬರ್‌ ಶತಕ ಗಳಿಸಿದರು. ಅದು ನಾನು ಕಂಡ ಅತ್ಯುತ್ತಮ ಶತಕಗಳಲ್ಲಿ ಒಂದು. ಲಾಕಿ ಫರ್ಗ್ಯೂಸನ್‌ ಅವರ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಅವರು ಶತಕ ಪೂರೈಸಿದರು. ಬಳಿಕ ಪಿಚ್‌ನಿಂದ ಡ್ರೆಸ್ಸಿಂಗ್‌ ರೂಮ್‌ನತ್ತ ಓಡಿಬಂದು ತಮ್ಮ ಬ್ಯಾಟ್‌ ತೋರಿಸಿದರು. ಆಗ ನನಗೆ, ‘ನಾನು ನೀಡಿದ್ದ ಸಂದೇಶ ಅವರಿಗೆ ತಲುಪಿದೆ’ ಎಂದು ಅನಿಸಿತು. ಆ ಕ್ಷಣ ನೆನಪಿಸಿಕೊಂಡರೂ ಈಗಲೂ ರೋಮಾಂಚನವಾಗುತ್ತದೆ” ಎಂದು ಆರ್ಥರ್‌ ತಿಳಿಸಿದ್ದಾರೆ.

ಮಿಕ್ಕಿ ಆರ್ಥರ್‌ ಪಾಕಿಸ್ತಾನದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಾಕಿಸ್ತಾನ ತಂಡ 2017ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಂಡಿತ್ತು. ಅದು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಗೆದ್ದ ಪ್ರಮುಖ ಐಸಿಸಿ ಪ್ರಶಸ್ತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement