ಚೆನ್ನೈ: ತೀವ್ರ ಕುತೂಹಲ ಕೆರಳಿಸಿದ್ದ ದುಲೀಪ್ ಟ್ರೋಫಿ 2026 ಟೂರ್ನಿಯ ಫೈನಲ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದು, ಇಶಾನ್ ಕಿಶನ್ ನಾಯಕತ್ವದ ಈಸ್ಟ್ ಝೋನ್ ಅನ್ನು ವಿಜೇತರಾಗಿ ಘೋಷಣೆ ಮಾಡಲಾಗಿದೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈಸ್ಟ್ ಝೋನ್ ಮತ್ತು ಸೌಥ್ ಝೋನ್ ನಡುವಿನ ಫೈನಲ್ ಪಂದ್ಯದ ಡ್ರಾದ ಹೊರತಾಗಿಯೂ, ಮೊದಲ ಇನ್ನಿಂಗ್ಸ್‌ನಲ್ಲಿ 372 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿದ್ದ ಈಸ್ಟ್ ಝೋನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಪಂದ್ಯ ಫಲಿತಾಂಶ ಕಾಣದಿದ್ದ ಸಂದರ್ಭದಲ್ಲಿ ಮೊದಲ ಇನ್ನಿಂಗ್ಸ್ ಲೀಡ್ ಪಡೆದ ತಂಡವನ್ನು ವಿಜಯಿ ಎಂದು ಘೋಷಿಸುವ ನಿಯಮದ ಮೇರೆಗೆ ಈಸ್ಟ್ ಝೋನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇಶಾನ್ ಕಿಶನ್ ಪಡೆ ಭರ್ಜರಿ ಬ್ಯಾಟಿಂಗ್
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಈಸ್ಟ್ ಝೋನ್ ತಂಡ ಪರ ನಾಯಕ ಇಶಾನ್ ಕಿಶನ್ ಕೇವಲ 334 ಎಸೆತಗಳಲ್ಲಿ 270 ರನ್‌ಗಳನ್ನು ಚಚ್ಚಿ ದಾಖಲೆ ಬರೆದಿದ್ದರು. ಇವರಿಗೆ ಭರ್ಜರಿ ಸಾಥ್ ನೀಡಿದ ಕುಮಾರ್ ಕುಶಾಗ್ರ (101 ರನ್) ಶತಕ ಸಿಡಿಸಿದ್ದರು.
ಇನ್ನು ಶಿಖರ್ ಮೋಹನ್ (85 ರನ್) ಹಾಗೂ ಅಭಿಮನ್ಯು ಈಶ್ವರನ್ (72 ರನ್) ಅರ್ಧಶತಕಗಳ ಕೊಡುಗೆ ನೀಡಿದ್ದರು. ಈ ಮೂಲಕ ಈಸ್ಟ್ ಝೋನ್ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 708 ರನ್ ಕಲೆಹಾಕಿತು.
ಮಂಕಾದ ಸೌತ್ ಝೋನ್ ಬ್ಯಾಟಿಂಗ್
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸೌತ್ ಝೋನ್ ಪರ ನಾಯಕ ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು 211 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 99 ರನ್ ಗಳಿಸಿ ಶತಕದ ಸನಿಹದಲ್ಲಿದ್ದರು.
ಆದರೆ, ದುರದೃಷ್ಟವಶಾತ್ ಮೊಹಮ್ಮದ್ ಖುರೇಷಿ ಬೌಲಿಂಗ್‌ನಲ್ಲಿ ಅವರಿಗೆ ಕ್ಯಾಚ್ ನೀಡಿ ಕೇವಲ 1 ರನ್‌ನಿಂದ ಶತಕದ ಅವಕಾಶವನ್ನು ಕೈಚೆಲ್ಲಿ ನಿರಾಸೆಯಿಂದ ಪೆವಿಲಿಯನ್ ಸೇರಿದರು. ಸೌತ್ ಝೋನ್ ತಂಡದ ಪರ ಇತರ ಪ್ರಮುಖ ಬ್ಯಾಟರ್‌ಗಳಾದ ದೇವದತ್ ಪಡಿಕ್ಕಲ್ 62 ರನ್ ಹಾಗೂ ಚಾಮಾ ಮಿಲಿಂದ್ 43 ರನ್ ಗಳಿಸಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.
ಅಂತಿಮವಾಗಿ ಸೌತ್ ಜೋನ್ 107.3 ಓವರ್‌ಗಳಲ್ಲಿ 336 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಬೃಹತ್ ಮುನ್ನಡೆ
372 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಈಸ್ಟ್ ಝೋನ್ ತಂಡವು 7 ವಿಕೆಟ್ ಕಳೆದುಕೊಂಡು 388 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಈ ಮೂಲಕ ಸೌತ್ ಝೋನ್ ತಂಡಕ್ಕೆ 761 ರನ್‌ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವುದು ಅಸಾಧ್ಯವಾಗಿರುವ ಕಾರಣ ಸೌತ್ ಝೋನ್ ತಂಡವು ಪಂದ್ಯವನ್ನು ಅಂತ್ಯಗೊಳಿಸಲು ನಿರ್ಧರಿಸಿದೆ.
ಅದರಂತೆ ಇದೀಗ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿದ್ದು, ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ಈಸ್ಟ್ ಝೋನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ
ಇನ್ನು ಫೈನಲ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಿಂದ 350 ರನ್ ಗಳನ್ನು ಕಲೆಹಾಕಿದ ಈಸ್ಟ್ ಝೋನ್ ನಾಯಕ ಇಶಾನ್ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸೌಥ್ ಝೋನ್ ನಾಯಕ ತಿಲಕ್ ವರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.