ಮುಂಬೈ: ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಯಿಂದ ನಿವೃತ್ತಿಯಾಗಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಇದೀಗ ಮುಂದಿನ ವರ್ಷ ಏಕದಿನ ಕ್ರಿಕೆಟ್ ನಿಂದಲೂ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ನಲ್ಲಿ ಭಾರತದ ಪರವಾಗಿ ನಾನು ಆಡಲಿರುವ ಕೊನೆಯ ವಿಶ್ವಕಪ್ ಆಗಿರಲಿದೆ ಮತ್ತು ಆ ವಿಶ್ವಕಪ್ ಗೆಲ್ಲಲು ಸರ್ವಶಕ್ತಿಯನ್ನು ಹಾಕಲು ಸಿದ್ಧನಿದ್ದೇನೆ. ವಿಶ್ವಕಪ್ ಗೆಲ್ಲುವುದೇ ಅಂತಿಮ ಗುರಿ ಮತ್ತು ಅದಕ್ಕಾಗಿ ಏನೇ ಮಾಡಬೇಕಾದರೂ ಮಾಡಲು ಸಿದ್ಧನಿದ್ದೇನೆ." ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
2027ರ ಏಕದಿನ ವಿಶ್ವಕಪ್ ನನ್ನ ಕೊನೆಯ ಏಕದಿನವಾಗಲಿದೆ ಎಂದು ವಿರಾಟ್ ಕೊಹ್ಲಿ ಅವರು ಜಿಯೋಸ್ಟಾರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ (ODI) 54 ಶತಕಗಳೊಂದಿಗೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರನಾಗಿರುವ ವಿರಾಟ್ ಕೊಹ್ಲಿ, ಈಗಾಗಲೇ ಟಿ20 ಅಂತಾರಾಷ್ಟ್ರೀಯ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು, ಪ್ರಸ್ತುತ ಭಾರತದ ಪರವಾಗಿ ಕೇವಲ 50 ಓವರ್‌ಗಳ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ.
ಕೊಹ್ಲಿಯ ವಿಶ್ವಕಪ್ ಮಹತ್ವಾಕಾಂಕ್ಷೆ
ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 14,941 ರನ್ ಗಳಿಸಿರುವ(ಸಚಿನ್ ತೆಂಡೂಲ್ಕರ್ ಅವರ 18,426 ರನ್‌ಗಳ ನಂತರ ಎರಡನೇ ಸ್ಥಾನದಲ್ಲಿದ್ದಾರೆ) 37 ವರ್ಷದ ವಿರಾಟ್ ಕೊಹ್ಲಿ, 2011ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್ ಗೆದ್ದಿದ್ದರು; ಆದರೆ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಅನುಭವಿಸಿದ್ದರು.
ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ 2027ರ ವಿಶ್ವಕಪ್ ವಿರಾಟ್ ಕೊಹ್ಲಿ ಅವರ ಐದನೇ ಏಕದಿನ ವಿಶ್ವಕಪ್ ಆಗಿರಲಿದೆ.
"ನನ್ನ ಪಾಲಿಗೆ, ಭಾರತಕ್ಕಾಗಿ ನಾನು ಆಡಲಿರುವ ಕೊನೆಯ ವಿಶ್ವಕಪ್ ಇದಾಗಿದೆ," ಎಂದು ವಿರಾಟ್ ಕೊಹ್ಲಿ ಶನಿವಾರ 'ಜಿಯೋಸ್ಟಾರ್' (JioStar) ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಅಭಿಮಾನಿಗಳಿಗೆ ಶಾಕ್
ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಮೂಲಕ ಏಕದಿನದಿಂದಲೂ ನಿವೃತ್ತಿಯಾಗುವುದಾಗಿ ಘೋಷಿಸುತ್ತಿದ್ದಂತೆ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಟೀಂ ಇಂಡಿಯಾ ಜರ್ಸಿಯಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ವಿದಾಯದ ಹೇಳಿಕೆ ಶಾಕ್ ನೀಡಿದೆ.