ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ರಿಕ್ಕಿ ಪಾಂಟಿಂಗ್ ರ ಹಳೆಯ ದಾಖಲೆಯೊಂದನ್ನು ಧೂಳಿಪಟ ಮಾಡಿದ್ದಾರೆ.
ಹೌದು.. ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಮೈದಾನದಲ್ಲಿ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್ ನೀಡಿದ್ದ 296 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ಕೇವಲ 41.4 ಓವರ್ ನಲ್ಲೇ 2 ವಿಕೆಟ್ ಕಳೆದುಕೊಂಡು 300 ರನ್ ಪೇರಿಸಿ 8 ವಿಕೆಟ್ ಅಂತರದಲ್ಲಿ ಭರ್ಜರಿ ಜಯಬೇರಿ ಭಾರಿಸಿತು.
ಭಾರತದ ಪರ ನಾಯಕ ಶುಭಮನ್ ಗಿಲ್ (110) ಮತ್ತು ವಿರಾಟ್ ಕೊಹ್ಲಿ (ಅಜೇಯ 139) ಶತಕಗಳ ನೆರವಿನಿಂದ ಭಾರತ ಭರ್ಜರಿ ಜಯ ಸಾಧಿಸಿತು.
ವಿರಾಟ್ ಕೊಹ್ಲಿ ಸ್ಫೋಟಕ ಇನ್ನಿಂಗ್ಸ್
ಈ ಪಂದ್ಯದಲ್ಲಿ 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 88 ಎಸೆತಗಳಲ್ಲಿ 9 ಸಿಕ್ಸರ್ ಗಳು ಮತ್ತು 10 ಬೌಂಡರಿಗಳ ಸಹಿತ ಅಜೇಯ 139 ರನ್ ಕಲೆಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
42ನೇ ಓವರ್ ನ 4ನೇ ಎಸೆತದಲ್ಲಿ ಸಿಕ್ಸರ್ ಗಳಿಸುವ ಮೂಲಕ ಕೊಹ್ಲಿ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ ತಂದಿತ್ತರು. ಈ ಮೂಲಕ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು.
ರಿಕ್ಕಿ ಪಾಂಟಿಂಗ್ ಹಳೆಯ ದಾಖಲೆ ಧೂಳಿಪಟ
ಏಕದಿನ ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವ ವೇಳೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮಾಜಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಬಳಿಕದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ODI ಪಂದ್ಯಗಳಲ್ಲಿ ರನ್ ಚೇಸ್ ವೇಳೆ ತಂಡ ಗೆಲುವು ಸಾಧಿಸಿದ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಭಾಗಿಯಾದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಈ ಅಂಕಿಅಂಶದಲ್ಲಿ ಸಚಿನ್ ತೆಂಡೂಲ್ಕರ್ 127 ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ 116 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 112 ಗೆಲುವುಗಳೊಂದಿಗೆ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 111 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್ ಕಾಲಿಸ್ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ ತಲಾ 110 ಗೆಲುವುಗಳೊಂದಿಗೆ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.
ವಿಶೇಷವಾಗಿ ಕೊಹ್ಲಿ ರನ್ ಚೇಸ್‌ಗಳಲ್ಲಿ ತೋರಿರುವ ಸ್ಥಿರ ಪ್ರದರ್ಶನವೇ ಈ ಅಂಕಿಅಂಶದಲ್ಲಿ ಅವರ ಸ್ಥಾನಕ್ಕೆ ಪ್ರಮುಖ ಕಾರಣವಾಗಿದೆ. ಗುರಿ ಬೆನ್ನಟ್ಟುವ ಸಂದರ್ಭಗಳಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಹಲವು ವರ್ಷಗಳಿಂದ ಭಾರತದ ODI ಯಶಸ್ಸಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
Involved in most wins in ODI run chases
127 S Tendulkar
116 MS Dhoni
112 V Kohli
111 R Ponting
110 J Kallis/ Rohit Sharma