ಜಾತಿ ಆಧಾರಿತ ನೇಮಕಾತಿ ನಿಲ್ಲಿಸಬೇಕು: ದಳವಾಯಿ
ಕೆಪಿಎಸ್ಸಿ ನೇಮಕಾತಿಯಲ್ಲಿ ಜಾತಿ ಆಧಾರಿತ ನೇಮಕಾತಿ ಮಾಡುತ್ತಿರುವುದರಿಂದಲೇ ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದು ಅರವಿಂದ ಎಂ.ದಳವಾಯಿ ಹೇಳಿದ್ದಾರೆ.
ಬೆಂಗಳೂರು: ಕೆಪಿಎಸ್ಸಿ ನೇಮಕಾತಿಯಲ್ಲಿ ಜಾತಿ ಆಧಾರಿತ ನೇಮಕಾತಿ ಮಾಡುತ್ತಿರುವುದರಿಂದಲೇ ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣ ಎಂದು ಅರವಿಂದ ಎಂ.ದಳವಾಯಿ ಹೇಳಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಳವಾಯಿ ಅವರು, ಕೆಪಿಎಸ್ಸಿಯಲ್ಲಿ ಜಾತಿ ಆಧಾರಿತ ನೇಮಕಾತಿ ಇರುವುದರಿಂದ ಎಲ್ಲಾ ರಾಜಕೀಯ ಪಕ್ಷದ ರಾಜಕಾರಣಿಗಳು ತಮ್ಮ ಅಧಿಕಾರದ ಪ್ರಭಾವದಿಂದ ತಮ್ಮ ವರ್ಗದವರನ್ನು ಆಯ್ಕೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಅವರ ಈ ನಡವಳಿಕೆಯ ಮೂಲಕ ಇಲಾಖೆಯಲ್ಲಿ ಭ್ರಷ್ಚಾಚಾರ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ನೇಮಕಾತಿಯಲ್ಲಿ ರಾಜಕಾರಣಿಗಳು ಪ್ರಭಾವ ಬೀರಿ ಇಂದು ಕೆಪಿಎಸ್ಸಿಯನ್ನು ಪಾಪದ ಕೂಪವನ್ನಾಗಿಸಿದ್ದಾರೆ. ಆದ್ದರಿಂದ ರಾಜ್ಯಸರ್ಕಾರ ಕೆಪಿಎಸ್ಸಿಯಲ್ಲಿನ ಬುಡದಲ್ಲಿರುವ ಸಮಸ್ಯೆಯ ಕುರಿತು ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈ ಗೊಳ್ಳಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳ ಕುರಿತು ಮಾತನಾಡಿದ ಅವರು, ಯುಪಿಎಸ್ಸಿ ಪ್ರಾದೇಶಿಕ ಲೋಕಸೇವಾ ಆಯೋಗಗಳ ಹಿರಿಯಣ್ಣನಿದ್ದಂತೆ. ಕೆಪಿಎಸ್ಸಿ ನೇಮಕಾತಿಯು ಯುಪಿಎಸ್ಸಿ ಮಾದರಿಯಲ್ಲಿ ನಡೆಸಬೇಕಿದ್ದು, ಜಾತಿ ವರ್ಗ ನೇಮಕಾತಿಯನ್ನು ತೆಗೆದುಹಾಕಬೇಕು ಎಂದು ದಳವಾಯಿ ಅವರು ಹೇಳಿದರು.
ಆಳುವ ಸರ್ಕಾರ ತನ್ನ ಇಚ್ಛಾನುಸಾರ ಸದಸ್ಯರನ್ನು ನೇಮಕಾತಿ ಮಾಡುವ ಬದಲು, ಉಚ್ಛನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸಲು ಅನುಸರಿಸುವ ಮಾನದಂಡಗಳನ್ನು ಇಲ್ಲಿಯೂ ಅನುಸರಿಸಬೇಕು ಮತ್ತು ಪರೀಕ್ಷಾ ಅಕ್ರಮಗಳಲ್ಲಿ ಭಾಗವಹಿಸುವವರಿಗೆ ಮತ್ತು ಸಂದರ್ಶನದಲ್ಲಿ ಸಹಕಾರ ನೀಡಲು ಶಿಫಾರಸ್ಸು ಮಾಡುವವರಿಗೆ ಕಾನೂನಿನ ಮೇರೆಗೆ ಜೈಲು ಶಿಕ್ಷೆಯಂತಹ ಶಿಕ್ಷೆ ವಿಧಿಸಬೇಕು. 1998-2004 ರ ನೇಮಕಾತಿಯಲ್ಲಿ ಆಯ್ಕೆಯಾಗಿರುವ ಅಧಿಕಾರಿಗಳನ್ನು ಕೈ ಬಿಟ್ಟು ಕೆಪಿಎಸ್ಸಿ ನೇಮಕಾತಿಯಲ್ಲಿ ಸುಧಾರಣಾ ಕ್ರಮ ಕೈ ಗೊಳ್ಳಬೇಕು ಎಂದು ದಳವಾಯಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದರು.