ಮೈಸೂರು ದಸರಾ: ಈ ಬಾರಿ ಖಾಸಗಿ ದರ್ಬಾರ್ ಇಲ್ಲ
ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ರಾಜಮನೆತನದವರ ಖಾಸಗಿ ದರ್ಬಾರ್ ಈ ಬಾರಿಯ...
ಮೈಸೂರು: ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ರಾಜಮನೆತನದವರ ಖಾಸಗಿ ದರ್ಬಾರ್ ಈ ಬಾರಿಯ ದಸರಾದಲ್ಲಿ ಕಾಣಸಿಗುವುದಿಲ್ಲ.
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿಧನರಾಗಿ ಇನ್ನೂ ಒಂದು ವರ್ಷ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಓಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಖಾಸಗಿ ದರ್ಬಾರ್ ಅನ್ನು ಏರ್ಪಡಿಸಲಾಗುವುದಿಲ್ಲ ಎಂದು ಮೈಸೂರು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಖಾಸಗಿ ದರ್ಬಾರ್ ಮಾತ್ರವಲ್ಲದೆ ರಾಜಮನೆತನದವರು ನಡೆಸುವ ಯಾವುದೇ ಆಚರಣೆಯನ್ನು ಕೂಡ ನಡೆಸಲಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಅರಣ್ಯಭವನದಲ್ಲಿ ಇಂದು ಅರ್ಜುನ ನೇತೃತ್ವದ ದಸರಾ ಆನೆಗಳನ್ನು ಸ್ವಾಗತಿಸಿ ಮಾತನಾಡಿದ ಸಚಿವ ಶ್ರೀನಿವಾಸ್ ಪ್ರಸಾದ್ ಅವರು, ಶ್ರೀಕಂಠದತ್ತ ಒಡೆಯರ್ ಅವರ ನಿಧನದಿಂದಾಗಿ ರಾಜಮನೆತನದವರು ಯಾವುದೇ ಆಚರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಣಿ ಪ್ರಮೋದಾ ದೇವಿ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಅವರ ಭಾವನೆಗಳಿಗೆ ಬೆಲೆ ನೀಡಲಿದ್ದು, ರಾಜಮನೆತನದವರು ನಡೆಸಿಕೊಡುವ ಯಾವುದೇ ಆಚರಣೆಗಳನ್ನು ಈ ಬಾರಿ ದಸರಾದಲ್ಲಿ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.
ಶ್ರೀಕಂಠದತ್ತ ಒಡೆಯರ್ ಅವರ ನಿಧನದ ನಂತರ ಅವರ ಉತ್ತರಾಧಿಕಾರಿಯ ನೇಮಕವಾಗಬೇಕಿತ್ತು. ಅವರಿಂದಲೇ ಖಾಸಗಿ ದರ್ಬಾರ್ ನೆರವೇರಬೇಕಿತ್ತು. ಆದರೆ ಅರಮನೆಯ ಕುರಿತು ಭುಗಿಲೆದ್ದಿರುವ ವಿವಾದಗಳ ಕುರಿತು ಮನನೊಂದಿರುವ ಪ್ರಮೋದಾದೇವಿ ಅವರು, ವಿವಾದಗಳು ಬಗೆಹರಿಯುವ ತನಕ ಉತ್ತರಾಧಿಕಾರಿ ನೇಮಕ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ಬಾರಿಯ ದಸರಾದಲ್ಲಿ ಖಾಸಗಿ ದರ್ಬಾರ್ ಇರುವುದಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಾರೆ.
ರಾಜವಂಶಸ್ಥರ ತೀರ್ಮಾನಕ್ಕೆ ಸರ್ಕಾರದ ಗೌರವ: ಸಿಎಂ ಸಿದ್ದರಾಮಯ್ಯ
ಈ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜವಂಶಸ್ಥರ ತೀರ್ಮಾನಕ್ಕೆ ಸರ್ಕಾರ ಗೌರವ ಕೊಡಲಿದೆ. ಈ ಬಾರಿಯ ದಸರಾದಲ್ಲಿ ಮಾತ್ರ ಖಾಸಗಿ ದರ್ಬಾರ್ ಇರುವುದಿಲ್ಲ ಎಂದು ಹೇಳಿದ್ದಾರೆ.