ರೇಪಿಸ್ಟ್ ಗಂಡ, ಪಾಪಿಷ್ಟ ಪತ್ನಿ
ಪತ್ನಿಯ ಖುಷಿಗಾಗಿ ಪಕ್ಕದ ಮನೆಯಾಕೆಯ ಮೇಲೆ ಪತಿಯಿಂದ ಅತ್ಯಾಚಾರ
ಬೆಂಗಳೂರು: ತನ್ನ ಪತ್ನಿಯನ್ನು ಖುಷಿಪಡಿಸಲು ಪಕ್ಕದ ಮನೆಯ ಗೃಹಿಣಿ ಮೇಲೆ ಪತಿಯೇ ಅತ್ಯಾಚಾರ ಮಾಡಿದ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿಯ ಚಿಕ್ಕಬಾಣವಾರದಲ್ಲಿ ವಾಸವಾಗಿರುವ ಕೇಬಲ್ ಆಪರೇಟರ್ ದಿಲೀಪ್ ಎಂಬಾತ ತನ್ನ ಪತ್ನಿ ಆಶಾಳ ಬಲವಂತದಿಂದಾಗಿ ಪಕ್ಕದ ಮನೆಯ ಗೃಹಿಣಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ. ಆಶಾ ಮತ್ತು ಪಕ್ಕದ ಮನೆಯ ಗೃಹಿಣಿ ಕೆಲವು ದಿನಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿಕೊಂಡಿದ್ದರು. ಈ ಘಟನೆಯ ನಂತರ ಗೃಹಿಣಿಯ ಮೇಲೆ ಕೋಪಕೊಂಡಿದ್ದ ಆಶಾ, ತನ್ನ ಪತಿಯನ್ನು ಪ್ರೇರೇಪಿಸಿ ಗೃಹಿಣಿಯ ಮೇಲೆ ಅತ್ಯಾಚಾರ ಮಾಡುವಂತೆ ಮಾಡಿದ್ದಾಳೆ.
ಅಲ್ಲದೆ ಅತ್ಯಾಚಾರದ ವೇಳೆ ಪತ್ನಿ ಆಶಾಳೆ ತನ್ನ ಪತಿಗೆ ಸಹಕಾರ ನೀಡುವಂತೆ ಗೃಹಿಣಿಯನ್ನು ಒತ್ತಾಯಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ದಿಲೀಪ್ ಮತ್ತು ಅತ್ಯಾಚಾರಕ್ಕೊಳಗಾದ ಗೃಹಿಣಿಯ ಕುಟುಂಬ ಕಳೆದ ಹಲವು ವರ್ಷಗಳಿಂದ ಪರಿಚಿತರಾಗಿದ್ದು, ಎರಡೂ ಕುಟುಂಬದವರು ಸ್ನೇಹಪೂರ್ವಕವಾಗಿದ್ದರು ಎಂದು ತಿಳಿದು ಬಂದಿದೆ. ಕಳೆದ 27ರಂದು ಕೊಂಚ ಕೆಲಸವಿದೆ ಎಂದು ಗೃಹಿಣಿಯನ್ನು ಮನೆಗೆ ಕರೆಸಿಕೊಂಡ ಆಶಾ ಆಕೆಯೊಂದಿಗೆ ತನ್ನ ಅಸ್ವಾಭಾವಿಕ ಲೈಂಗಿಕ ಭಾವನೆಗಳ ಕುರಿತು ಗೃಹಿಣಿಯೊಂದಿಗೆ ಚರ್ಚಿಸಿದ್ದು, ಅಶ್ಲೀಲ ಚಿತ್ರಗಳ ಸಿಡಿಯನ್ನು ನೋಡುವುದು ತನಗೆ ಇಷ್ಟವಿದೆ ಎಂದು ಹೇಳುತ್ತಾಳೆ. ಇದಕ್ಕೆ ಉತ್ತರಿಸಿದ ಗೃಹಿಣಿ ನಿನ್ನ ಗಂಡನಿಗೆ ಹೇಳಿ ತರಿಸಿಕೊಂಡು ನೋಡು ಎಂದು ಹೇಳುತ್ತಾಳೆ. ಆದರೆ ಇದಕ್ಕೊಪ್ಪದ ಆಶಾ ನೀನು ನನ್ನ ಗಂಡನೊಂದಿಗೆ ಸಹಕರಿಸು, ನಾನು ಅದನ್ನು ನೋಡುತ್ತೇನೆ ಎಂದು ಒತ್ತಾಯಿಸುತ್ತಾಳೆ. ಆದರೆ ಇದಕ್ಕೆ ಗೃಹಿಣಿ ಒಪ್ಪದಿದ್ದಾಗ ಆಕೆಯನ್ನು ಬಲವಂತವಾಗಿ ಕೋಣೆಗೆ ಸೆಳೆದು ತನ್ನ ಗಂಡನಿಂದ ಅತ್ಯಾಚಾರ ಮಾಡಿಸುತ್ತಾಳೆ. ಬಳಿಕ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ಪತಿ ಮತ್ತು ಮಗುವನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ.
ಮತ್ತೆ ಜುಲೈ 10ರಂದು ಗೃಹಿಣಿ ಮನೆಗೆ ತೆರಳಿದ ದಿಲೀಪ್ ಮತ್ತು ಆಶಾ ಆಕೆಯನ್ನು ಮತ್ತೆ ಒತ್ತಾಯಿಸುತ್ತಾರೆ. ಇದಕ್ಕೆ ಸೊಪ್ಪು ಹಾಕದ ಗೃಹಿಣಿ ತನ್ನ ಮೇಲಾದ ದೌರ್ಜನ್ಯವನ್ನು ತನ್ನ ಪತಿಯೊಂದಿಗೆ ಹೇಳಿಕೊಂಡಾಗ ಆತ ದಿಲೀಪ್ನೊಂದಿಗೆ ಮಾತಿನ ಚಕಮಕಿ ನಡೆಸುತ್ತಾನೆ. ಕೊನೆಗೆ ಸ್ಥಳೀಯರ ಮಧ್ಯಪ್ರವೇಶದಿಂದ ಜಗಳ ಶಮನವಾಗುತ್ತದೆ. ಪ್ರಕರಣದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಗೃಹಿಣಿಯ ಕುಟುಂಬ ಕಳೆದ 28ರಂದು ತಮ್ಮ ಸ್ವಂತ ಊರಾದ ಹಾಸನಕ್ಕೆ ತೆರಳಿ ಅಲ್ಲಿಯೇ ಕೆಲ ದಿನಗಳನ್ನು ಕಳೆದು ನಂತರ ಆಗಸ್ಟ್ 13ರಂದು ಬೆಂಗಳೂರಿಗೆ ವಾಪಸಾಗುತ್ತಾರೆ. ಈ ವೇಳೆ ಮತ್ತೆ ಗೃಹಿಣಿಯೊಂದಿಗೆ ಜಗಳಕ್ಕಿಳಿದ ಆಶಾ ತನ್ನ ಪತಿಯೊಂದಿಗೆ ಸಂಬಂಧವಿಟ್ಟುಕೊಂಡಂತೆ ಊರಿನಲ್ಲಿ ಮತ್ತೊಬ್ಬನೊಂದಿಗೂ ಸಂಬಂಧವಿರಿಸಿಕೊಂಡಿರುವೆ ಎಂದು ಗೃಹಿಣಿಯೊಂದಿಗೆ ಜಳಕ್ಕಿಳಿಯುತ್ತಾಳೆ. ಈ ಬಾರಿ ಜಗಳ ತಾರಕ್ಕೇರಿ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಬಡಿದಾಡಿಕೊಳ್ಳುತ್ತಾರೆ. ಕೊನೆಗೆ ಗೃಹಿಣಿಯ ಪತಿ ಪೊಲೀಸ್ ದೂರು ನೀಡುತ್ತಾನೆ.
ವಿಚಾರಣೆ ನಡೆಸಿದ ಪೊಲೀಸರಿಗೆ ದಿಲೀಪ್ ಮತ್ತು ಆತನ ಪತ್ನಿ ಆಶಾಳ ವಿಕೃತ ಕಾರ್ಯ ತಿಳಿಯುತ್ತದೆ. ಕೂಡಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು, ಅವರಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 114 (ಅಪರಾಧದ ವೇಳೆ ಸ್ಥಳದಲ್ಲಿದ್ದು, ಅಪರಾಧಕ್ಕೆ ಪ್ರೇರೇಪಿಸುವುದು)(ಅಪರಾಧದಷ್ಟೇ ಶಿಕ್ಷಾರ್ಹ ಅಪರಾಧ), ಸೆಕ್ಷನ್ 506 (ಪೂರ್ಣ ಪ್ರಜ್ಞೆಯಿಂದ ಅಪರಾಧದಲ್ಲಿ ತೊಡಗುವುದು) ಸೇರಿದಂತೆ ಕೊಲೆ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಒಟ್ಟಾರೆ ಪತ್ನಿಯ ವಿಕೃತ ಭಾವನೆಗಳಿಗೆ ಮಣಿದ ಪತಿ ಈಗ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾನೆ. ತನ್ನ ವಿಕೃತಿಯಿಂದಾಗಿ ಪತ್ನಿ ಆಶಾ ಕೂಡ ಪತಿಯೊಂದಿಗೆ ಸೆರವಾಸ ಅನುಭವಿಸುತ್ತಿದ್ದಾಳೆ.