ಅಪರೂಪದ ಖಾಯಿಲೆ ರೋಗಿ ನಿಧಿ ಬಿಡುಗಡೆಗೆ ಮನವಿ
ಬೆಂಗಳೂರು: ಅಪರೂಪದ ಖಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಬಜೆಟ್‌ನಲ್ಲಿ ಸರ್ಕಾರ ಮಂಡಿಸಿದ್ದ ನಿಧಿಯನ್ನು ಶೀಘ್ರ ಬಿಡುಗಡೆ ಮಾಡುವಂತೆ ಲೈಸೊಸೊಮಲ್ ಸ್ಟೋರೇಜ್ ಡಿಸ್‌ಆರ್ಡರ್ ಸಪೋರ್ಟ್ ಸೊಸೈಟಿ ಆಗ್ರಹಿಸಿದೆ.
ಈ ಕುರಿತು ಇಂದು ಕಬ್ಬನ್‌ಪಾರ್ಕ್‌ನಲ್ಲಿ ಮೌನ ಕಾಲ್ನಡಿಗೆ ಜಾಥಾದ ನಂತರ ಪತ್ರಿಕಾಗೋಷ್ಟಿಯನ್ನು ಆಯೋಜಿಸಿದ್ದ ಲೈಸೊಸೊಮಲ್ ಸ್ಟೋರೇಜ್ ಡಿಸ್‌ಆರ್ಡರ್ ಸಪೋರ್ಟ್ ಸೊಸೈಟಿ, ಅಪರೂಪ ಖಾಯಿಲೆಗೆ ತುತ್ತಾದ ಮಕ್ಕಳನ್ನು ಕರೆತಂದು ಅವರ ಖಾಯಿಲೆ ಹಾಗೂ ಚಿಕಿತ್ಸೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕುರಿತು ಕಾರ್ಯಕ್ರಮ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಕ್ಕಳ ಅಪಸಾಮಾನ್ಯತೆ ಬಗ್ಗೆ ಮಾತನಾಡಿದ ಡಾ.ಮೀನಾಕ್ಷಿ ಅವರು, ಶೇಕಡ 80 ರಷ್ಟು ಜನರಲ್ಲಿ ಈ ಅಪರೂಪದ ಖಾಯಿಲೆಗಳು ಅನುವಂಶೀಯತೆಯಿಂದ ಬರಲಿದ್ದು, ಪ್ರಾರಂಭದಲ್ಲಿಯೇ ಚಿಕಿತ್ಸೆಯನ್ನು ನೀಡಿದರೆ ಮಾತ್ರ ಗುಣಮುಖರಾಗುವ ಅವಕಾಶಗಳಿರುತ್ತವೆ. ಒಂದು ವೇಳೆ ಚಿಕಿತ್ಸೆ ನೀಡುವುದು ವಿಳಂಬವಾದರೆ ಅಂತಹವರು ಗಂಭೀರ ತೊಂದರೆಗಳಿಗೆ ತುತ್ತಾಗುವ ಸಂದರ್ಭಗಳು ಏರ್ಪಡಬಹುದು.
ಇಂತಹ ಚಿಕಿತ್ಸೆಗಳು ದುಬಾರಿ ವೆಚ್ಚದಾಗಿದ್ದು, ಸಾಕಷ್ಟು ಪೋಷಕರು ವೆಚ್ಚ ಭರಿಸಲಾಗದೆ ಚಿಕಿತ್ಸೆ ಕೊಡಿಸಲು ಹಿಂದು ಮುಂದು ನೋಡುತ್ತಾರೆ. ಇದರಿಂದ ರೋಗ ಮತ್ತಷ್ಟು ಉಲ್ಬಣಗೊಂಡು, ಮಕ್ಕಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಂಜಿತ್ ಸಿಂಗ್ ಅವರು, ಅಪರೂಪದ ಖಾಯಿಲೆಗಳ ಚಿಕಿತ್ಸೆಗಳು ಬಡತನದಲ್ಲಿರುವವರಿಗೆ ಕೈಗೆಟುಕದ ವೆಚ್ಚದಲ್ಲಿರುವುದರಿಂದ ಇಂತಹವರ ಸಹಾಯಕ್ಕೆ ಸರ್ಕಾರ ನೆರವಾಗಬೇಕು. ಬಜೆಟ್‌ನಲ್ಲಿ ಮಂಡನೆಯಾದ ನಿಧಿಯನ್ನು ಸರ್ಕಾರ ಶೀಘ್ರಗತಿಯಲ್ಲಿ ಬಿಡುಗಡೆ ಮಾಡಿದರೆ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತದೆ. ಆದ್ದರಿಂದ ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಿ, ನಿಧಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುಬೇಕು ಎಂದು ಮನವಿ ಮಾಡಿದರು.