ಆ.21ಕ್ಕೆ 'ಭ್ರಷ್ಟಾಚಾರ ಭೂತ ದಹನ'
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಬೆಂಗಳೂರು ಸಿಟಿಜೆನ್ಸ್ ಫೋರಂ ಸಂಸ್ಥೆಯು, ಆಗಸ್ಟ್ 21ಕ್ಕೆ ಭ್ರಷ್ಟಾಚಾರ ಭೂತ ದಹನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಸಿಟಿಜೆನ್ಸ್ ಫೋರಂ ಸಂಸ್ಥೆಯ ಅಧ್ಯಕ್ಷ ಬಿ.ಆರ್.ರಾಮೇಗೌಡ, ಕೆಪಿಎಸ್‌ಸಿ ಪಾಪಕೂಪದ ಪಟ್ಟಿಯನ್ನು ರದ್ದು ಮಾಡಿರುವ ಸರ್ಕಾರದ ನಿಲುವಿಗೆ ನಮ್ಮ ಬೆಂಬಲವಿದ್ದು, ಸರ್ಕಾರದ ನಿರ್ಧಾರವನ್ನು ನಮ್ಮ ಸಂಸ್ಥೆಯು ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಕೆಪಿಎಸ್‌ಸಿ ಹಗರಣದಲ್ಲಿ ಪಾಲ್ಗೊಂಡಿರುವ ಕೆಲವು ಭ್ರಷ್ಟ ಅಧಿಕಾರಿಗಳು ಪಟ್ಟಿ ರದ್ದತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳನ್ನು ಸಾಮಾಜದಿಂದ ನಿರ್ಮೂಲನೆ ಮಾಡಬೇಕಾಗಿದೆ. ಹಾಗಾಗಿ ಭ್ರಷ್ಟಚಾರಿಗಳಿಗೆ ಅಧಿಕಾರಿಗಳಾಗುವ ಅವಕಾಶ ದೊರೆಯಬಾರದೆಂಬ ಉದ್ದೇಶದಿಂದ ಸಂಸ್ಥೆಯು, ಆಗಸ್ಟ್ 21 ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಭ್ರಷ್ಟಾಚಾರ ಭೂತ ದಹನ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದು, ನಂತರದ ದಿನಗಳಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲೂ ಯುವಕರನ್ನು ಸಂಘಟಿಸಿ ಕಾರ್ಯಕ್ರಮವನ್ನು ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.