ಬಿಬಿಎಂ ಬೇಜಾವಾಬ್ದಾರಿತನದಿಂದ ಅನಾರೋಗ್ಯಕ್ಕೀಡಾಗುತ್ತಿರುವ ಅಂಗವಿಕಲ ಮಕ್ಕಳು
ಬೆಂಗಳೂರು: ಹಲವು ವರ್ಷಗಳಿಂದ ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆಯು ಇಂದಿರಾ ನಗರದಲ್ಲಿ ಅಂಗವಿಕಲರ ಶಾಲೆ ನಡೆಸುತ್ತಿದ್ದು, ಈ ಸ್ಥಳದಲ್ಲಿ ಬಿಬಿಎಂಪಿ ಕಸವಿಲೇವಾರಿ ಮಾಡುತ್ತಿರುವುದರಿಂದ, ಅಲ್ಲಿನ ಅಂಗವಿಕಲ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆಯ ಉಪನಿರ್ದೇಶಕಿ ಪ್ರಿಯರಾವ್ ಸುಮಾರು 7 ವರ್ಷಗಳಿಂದಲೂ ಸ್ಥಳದಲ್ಲಿ ಬಿಬಿಎಂಪಿ ಕಸವಿಲೇವಾರಿ ಮಾಡುತ್ತಿದ್ದು, ಅಂದಿನಿಂದ ಇಂದಿನವರೆಗೂ ಸಾಕಷ್ಟು ಮನವಿ ಪತ್ರಗಳನ್ನು ನೀಡಿದ್ದರು, ಬಿಬಿಎಂಪಿ ಇಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಸವಿಲೇವಾರಿಯಿಂದ ಶಾಲೆಯಲ್ಲಿರುವ ಅಂಗವಿಕಲ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಅನಾರೋಗ್ಯಕ್ಕೀಡಾಗುತ್ತಿದ್ದಾರೆ.
ಇದರಿಂದ ಮಕ್ಕಳ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದು ಮುಂದು ನೋಡುವಂತಾಗಿದೆ. ಕಸದಿಂದ ಬರುವ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಇಲ್ಲಿನ ಅಂಗವಿಕಲ ಮಕ್ಕಳು ಸಾಕಷ್ಟು ಹರಸಾಹಸ ಪಡುವಂತಾಗಿದೆ. ಹಾಗಾಗಿ ಬಿಬಿಎಂಪಿ ಈಗಲಾದರು ಎಚ್ಚೆತ್ತುಕೊಂಡು ಕಸವಿಲೇವಾರಿಯನ್ನು ಬೇರೆಡೆ ರವಾನಿಸಬೇಕು ಎಂದು ಒತ್ತಾಯಿಸಿದರು.
ಇಂದಿರಾನಗರದ ಸುತ್ತಮುತ್ತ ಇರುವ ಪ್ರಿಸ್ಟಿನ್ ಶಾಲೆ, ಸಿಲಿಕಾನ್ ಸಿಟಿ ಶಾಲೆ ಹಾಗೂ ನಮ್ಮ ಸಂಸ್ಥೆ ಒಟ್ಟುಗೂಡಿ ಮಕ್ಕಳ ಎಲ್ಲಾ ಪೋಷಕರೊಂದಿಗೆ ಆ20 ರಂದು ಪ್ರತಿಭಟನೆಯನ್ನು ಶಾಲೆಯ ಮುಂದೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.