ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಸಾಜ್ ಹೆಸರಲ್ಲಿ 'ಮಾಂಸದಂಧೆ'

ಪೊಲೀಸರಿಗೆ ಕ್ಯಾರೇ ಅನ್ನಲ್ಲ, ನ್ಯಾಯಾಂಗದ ಭಯವೇ ಇಲ್ಲ

Srinivasa Murthy VN
Updated On : 20 Aug 2014, 1:41 am

ಬೆಂಗಳೂರು: ಮಾಂಸದಂಧೆ (ವೇಶ್ಯಾವಾಟಿಕೆ)ಯನ್ನು ನಿಷೇಧಿಸಿದ್ದರೂ, ಮಸಾಜ್ ಪಾರ್ಲರ್‌ನ ಹೆಸರಲ್ಲಿ ಕೆಲ ದಂಧೆಕೋರರು ಬೆಂಗಳೂರಿನ ಹಲವೆಡೆ ಎಗ್ಗಿಲ್ಲದೇ ತಮ್ಮ ದಂಧೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಪ್ರತಿಷ್ಟಿತ ಇಂದಿರಾನಗರ, ಬನಶಂಕರಿ ಮತ್ತು ಪ್ರೇಜರ್‌ಟೌನ್ ಸೇರಿದಂತೆ ನಗರದ ಹಲವೆಡೆ ಮಸಾಜ್ ಪಾರ್ಲರ್‌ನ ಹೆಸರಲ್ಲಿ ಮಾಂಸದಂಧೆ ನಡೆಸಲಾಗುತ್ತಿದೆ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ದಿನ ಪತ್ರಿಕೆಯ ವರದಿಗಾರರು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮಸಾಜ್ ಪಾರ್ಲರ್‌ಗಳ ಮತ್ತೊಂದು ಕರಾಳ ಮುಖವಾಡ ಬಯಲಾಗಿದ್ದು, ನಾವು ನೀಡುವ ಹಣಕ್ಕೆ ತಕ್ಕಂತೆ 'ಸೇವೆಗಳನ್ನು' ನೀಡಲಾಗುತ್ತಿದೆ.

ಇಂದಿರಾನಗರದಲ್ಲಿರುವ ಒಂದು ಪಾರ್ಲರ್, ತನ್ನ ಸೇವೆಗಳ ದರ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದೆ. ಪಾರ್ಲರ್‌ನ ಮ್ಯಾನೇಜರ್ ಹೇಳುವಂತೆ, ನಮ್ಮಲ್ಲಿ ವಿವಿಧ ರೀತಿಯ ಮಸಾಜ್‌ಗಳಿದ್ದು, ಒಂದು ಗಂಟೆಯ ಬಾಡಿ ಟು ಬಾಡಿ ಮಸಾಜ್‌ಗೆ 2.500 ರುಪಾಯಿಗಳನ್ನು ಮತ್ತು sexual intercourse (ರತಿ ಕ್ರಿಯೆ ಸಹಿತ ಮಸಾಜ್‌) ಗೆ 3000 ರುಪಾಯಿಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾನೆ.

ಅಲ್ಲದೆ ತನ್ನ ಬಳಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಹುಡುಗಿಯರು ಕೂಡ ಇದ್ದು, ದರಕ್ಕೆ ಅನುಗುಣವಾಗಿ ಹುಡುಗಿಯರನ್ನು ಸಪ್ಲೈ ಮಾಡುತ್ತೇವೆ ಎಂದು ಆಫರ್ ನೀಡುತ್ತಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸೇವೆಗಳ ನೂರಾರು ಜಾಹಿರಾತುಗಳು ಚಾಲ್ತಿಯಲ್ಲಿದ್ದು, ನಾವಿದ್ದ ಸ್ಥಳಕ್ಕೆ ಹುಡುಗಿಯರನ್ನು ಕಳುಹಿಸುವುದಾಗಿ ಅಥವಾ ಅವರ ಕೇಂದ್ರಕ್ಕೇ ನಮ್ಮನ್ನು ಕರೆದೊಯ್ಯುವುದಾಗಿ ಮಧ್ಯವರ್ತಿಗಳು ಜಾಹಿರಾತಿನಲ್ಲಿ ತಿಳಿಸಿರುತ್ತಾರೆ. ಇಂತಹುದೇ ಜಾಹಿರಾತನ್ನು ಬೆನ್ನತ್ತಿದಾಗ ಪ್ರೇಜರ್‌ಟೌನ್‌ನಲ್ಲಿ ಮತ್ತೊಂದು ಮಸಾಜ್ ಪಾರ್ಲರ್ ದೊರೆಯುತ್ತದೆ. ಇಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ, ನಮ್ಮಲ್ಲಿ ಹಾಫ್ ಮತ್ತು ಫುಲ್ ಸರ್ವೀಸ್‌ಗಳಿದ್ದು, 3 ರಿಂದ 5 ಸಾವಿರದವರೆಗೆ ಚಾರ್ಜ್ ಮಾಡುತ್ತೇವೆ. ಹಾಫ್ ಸರ್ವೀಸ್ ಎಂದರೆ ನಗ್ನವಾಗಿ ಮಸಾಜ್ ಮಾಡುವುದು ಮತ್ತು ಫುಲ್ ಸರ್ವೀಸ್ ಎಂದರೆ ರತಿ ಕ್ರಿಯೆ ಸಹಿತ ಮಸಾಜ್. ನಮ್ಮಲ್ಲಿ ಸಂಗಾತಿ ಆಯ್ಕೆಯ ಅವಕಾಶ ಕೂಡ ಇದ್ದು, ನಿಮಗೆ ಸ್ಯೂಟ್ ಆಗಬಲ್ಲವರನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಮತ್ತು ನಮ್ಮಲ್ಲಿ ಪಿಕ್‌ಅಪ್ ಅಂಡ್ ಡ್ರಾಪಿಂಗ್ ಸೇವೆಗಳು ಕೂಡ ಇವೆ ಎಂದು ಅಲ್ಲಿನ ಮಹಿಳಾ ಮ್ಯಾನೇಜರ್ ಹೇಳುತ್ತಾರೆ.

ಪ್ರತಿಷ್ಟಿತ ಬನಶಂಕರಿಯಲ್ಲಿ ಇರುವ ಮತ್ತೊಂದು ಪಾರ್ಲರ್‌ನಲ್ಲಿ ಇಂತಹುದೇ ಆಫರ್‌ಗಳನ್ನು ನೀಡಲಾಗುತ್ತಿದೆ. ಈ ಮಸಾಜ್ ಪಾರ್ಲರ್‌ಗಳ ಸಿಬ್ಬಂದಿಗಳ ಮಾತುಕೇಳಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಇವರಿಗೆ ಪೊಲೀಸರ ಭಯವಾಗಲಿ ಅಥವಾ ಕಾನೂನಿನ ಭಯವಾಗಲಿ ಇಲ್ಲ. ಹಣ ಸಂಪಾದನೆಯೇ ಇವರ ಮುಖ್ಯಗುರಿ. ಒಂದು ವೇಳೆ ಇವರು ಗಿರಾಕಿಗಳಿಗೆ ಮೊಸ ಮಾಡಿದರೂ ಅವರು ಪೊಲೀಸರ ಬಳಿ ಹೋಗುವುದಿಲ್ಲ ಎಂಬ ಭಂಡ ನಂಬಿಕೆ ಇದೆ. ಏಕೆಂದರೆ ಪೊಲೀಸರ ಬಳಿ ಹೋದರೆ ಅವರ ಮಾನವೇ ಹೋಗುತ್ತದೆ ಎಂಬ ಭಯದಿಂದ ಮೋಸಹೋದ ಬಹುತೇಕರು ದೂರು ನೀಡುವ ಸಾಹಸಕ್ಕೆ ಮುಂದಾಗುವುದಿಲ್ಲ. ಇಂತಹ ಅಂಶಗಳನ್ನೇ ತಮ್ಮ ಬಂಡವಾಳವಾಗಿಸಿಕೊಂಡಿರುವ ಇವರು ತಮ್ಮ ದಂಧೆಯನ್ನು ಎಗ್ಗಿಲ್ಲದೇ ಸಾಗಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು, ಜಾಹಿರಾತಿಗೂ ಅವರ ಕೇಂದ್ರದಲ್ಲಿ ನಡೆಯುವ ಸೇವೆಗಳಿಗೂ ಅಜಗಜಾಂತರ ವ್ಯತ್ಯಾಸ ವಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ಇಂತಹ ದಂಧೆಯಲ್ಲಿ ತೊಡಗಿರುವವರು ವೃತ್ತಿಪರ ವೇಶ್ಯೆಯರು ಮತ್ತು ಪಿಂಪ್‌ಗಳು. ಇವರಿಗೆ ಕಾನೂನಿನ ಭಯವಾಗಲಿ ಅಥವಾ ಪೊಲೀಸರ ಭಯವಾಗಲಿ ಇಲ್ಲ. ಹಣ ಬಿಸಾಡಿದರೆ ಜಾಮೀನು ಪಡೆದು ಹೊರಬಹುದು ಎಂಬ ಕಾರಣದಿಂದ ಪದೇ ಪದೇ ಇಂತಹ ಕಾರ್ಯಗಳಲ್ಲಿ ತೊಡಗುತ್ತಾರೆ. ಅಥವಾ ಒಂದಷ್ಟು ದಿನ ಜೈಲಿನಲ್ಲಿದ್ದು, ಬಿಡುಗಡೆಯಾದ ಬಳಿಕ ಮತ್ತದೇ ಕ್ರಿಯೆಯಲ್ಲಿ ತೊಡಗುತ್ತಾರೆ. ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಅವರು ನೀಡುವ ಜಾಹಿರಾತಿನಲ್ಲಿ ಕೇವಲ ಮಸಾಜ್ ಮಾಡುವುದಾಗಿ ಹೇಳಿರುತ್ತಾರೆ. ಆದರೆ ಒಮ್ಮೆ ಅವರ ಕೇಂದ್ರ ಪ್ರವೇಶಿಸಿದರೆ ಇಂತಹ ಅಕ್ರಮ ಸೇವೆಗಳ ಆಫರ್ ನೀಡುತ್ತಾರೆ'.

'ಅವರ ಆಫರ್‌ಗಳಿಗೆ ಮರುಳಾಗುವವರು ತಮಗೆ ಬೇಕಾದ ಸೇವೆ ಪಡೆಯುತ್ತಾರೆ. ಇಂತಹವರಿಂದ ಮೋಸಕ್ಕೆ ಒಳಗಾದವರು ತಮ್ಮ ಮರ್ಯಾದೆಗೆ ಅಂಜಿ ವಿಚಾರವನ್ನು ಪೊಲೀಸರ ಗಮನಕ್ಕೆ ತರುವುದಿಲ್ಲ. ಹೀಗಾಗಿ ಬಹುತೇಕ ಪ್ರಕರಣಗಳು ಬಯಲಿಗೆ ಬರುವುದೇ ಇಲ್ಲ'.

'ಇಂತಹ ವ್ಯಕ್ತಿಗಳ ವಿರುದ್ಧ ಅನೈತಿಕ ಚಟುವಟಿಕೆ, ಲೈಂಗಿಕ ಶೋಷಣೆ ಮತ್ತು ಮಹಿಳೆಯ ಕಳ್ಳ ಸಾಗಣೆಯ ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳಬಹುದು. ಆದರೆ ಇಂತಹ ಪಾರ್ಲರ್‌ಗಳು ಪದೇ ಪದೇ ತಮ್ಮ ತಮ್ಮ ವಿಳಾಸವನ್ನು ಬದಲಿಸುವುದರಿಂದ ಇವುಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯವಾಗುತ್ತದೆ'ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ರಮಕ್ಕೆ ಹಿನ್ನಡೆ
ಇದೇ ವಿಚಾರವಾಗಿ ತಮ್ಮ ಕಳವಳ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಅವರು, ಇಂತಹ ಪಾರ್ಲರ್‌ಗಳಿಂದ ನಗರದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಹಣದ ಆಮಿಷ ತೋರಿಸಿ ಹೆಣ್ಣು ಮಕ್ಕಳನ್ನು ಬಲವಂತವಾಗಿ ಈ ಪಾಪಕೂಪಕ್ಕೆ ದೂಡಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಸಭೆ ಕರೆದಿದ್ದೇವೆ. ಆದರೆ ಇಂತಹ ಪಾರ್ಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಪ್ರಮುಖ ಸಾಕ್ಷ್ಯಾಧಾರಗಳಾಗಲಿ ಅಥವಾ ದೂರುಗಳಾಗಲಿ ನಮಗೆ ಈವರೆಗೂ ಬಂದಿಲ್ಲ. ಹೀಗಾಗಿ ಇಂತಹ ಪಾರ್ಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂತಹ ಕೇಂದ್ರಗಳಿಗೆ ಅವಕಾಶವಿಲ್ಲ
ಯಾವುದೇ ಕಾರಣಕ್ಕೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇಂತಹ ಅನೈತಿಕ ಚಟುವಟಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಹೆಸರಾಂತ ಆಯುರ್ವೇದ ಮತ್ತು ಪಂಚಕರ್ಮ ಮಸಾಜ್ ಕೇಂದ್ರಗಳಿಗೆ ಮಾತ್ರ ಬಿಬಿಎಂಪಿ ಪರವಾನಗಿ ನೀಡುತ್ತಿದೆ. ಇಂತಹ ಅಕ್ರಮ ಕೇಂದ್ರಗಳು ಪತ್ತೆಯಾದರೆ ಖಂಡಿತವಾಗಿಯೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಿಬಿಎಂಪಿ ಕಮಿಷನರ್ ಎಂ.ಲಕ್ಷ್ಮಿನಾರಾಯಣ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement