9.35 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳು ಪತ್ತೆ
ರಾಜ್ಯದಲ್ಲಿ 9.35 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳು ಪತ್ತೆಯಾಗಿದ್ದು, 2.50 ಲಕ್ಷ ಚೀಟಿದಾರರಿಗೆ ಮುಂದಿನ ತಿಂಗಳಿಂದ ಪಡಿತರ ವಿತರಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು: ರಾಜ್ಯದಲ್ಲಿ 9.35 ಲಕ್ಷ ಸಂಶಯಾಸ್ಪದ ಪಡಿತರ ಚೀಟಿಗಳು ಪತ್ತೆಯಾಗಿದ್ದು, 2.50 ಲಕ್ಷ ಚೀಟಿದಾರರಿಗೆ ಮುಂದಿನ ತಿಂಗಳಿಂದ ಪಡಿತರ ವಿತರಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಉಳಿದ 6.85 ಲಕ್ಷ ಚೀಟಿದಾರರಿಗೆ ಚುನಾವಣೆ ಗುರುತಿನ ಚೀಟಿ ಹಾಗೂ ಆಧಾರ್ ಗುರುತಿನ ಸಂಖ್ಯೆ ನೀಡಲು ಸೆ.15ರವರೆಗೆ ಕಾಲಾವಕಾಶ ನೀಡಲಾಗಿದೆ. ಮಾಹಿತಿ ನೀಡದಿದ್ದರೆ ಅಕ್ಟೋಬರ್ ತಿಂಗಳಿಂದ ಅವರಿಗೂ ಪಡಿತರ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ಹಾಗೆಯೇ ಹೊಸ ಅರ್ಜಿಗಳ ವಿಲೇವಾರಿ ನಡೆಯುತ್ತಿದ್ದು, 20 ಲಕ್ಷ ಅರ್ಜಿಗಳಲ್ಲಿ ಸುಮಾರು 10 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದ 8 ಲಕ್ಷ ಅರ್ಜಿದಾರರಿಂದ ಚುನಾವಣೆ ಗುರುತಿನ ಚೀಟಿ ಹಾಗೂ ಆಧಾರ್ ಗುರುತಿನ ಸಂಖ್ಯೆ ಕೇಳಲಾಗಿದೆ. ನೀಡದಿದ್ದಲ್ಲಿ ಅವರಿಗೆ ಪಡಿತರ ಚೀಟಿ ವಿತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರಿಂದಲೇ ಖರೀದಿಸಿದ ಅಕ್ಕಿಯನ್ನು ಸರ್ಕಾರಕ್ಕೆ ಲೆವಿ ರೂಪದಲ್ಲಿ ನೀಡದಿದ್ದರೆ ಹಾಗೂ ಎಂಎಸ್ಪಿ ಪ್ರಮಾಣಪತ್ರವಿರದಿದ್ದರೆ ಲೆವಿ ಅಕ್ಕಿಗೆ ಹಣ ಕೆಜಿಗೆ 24 ನೀಡುವುದಿಲ್ಲ, ಬದಲಾಗಿ ಕೇಂದ್ರ ಸರ್ಕಾರದ ಮೊತ್ತವನ್ನೇ ನೀಡುತ್ತೇವೆ ಎಂದು ಅವರು ತಿಳಿಸಿದರು.
ಸಲಹಾ ಮಂಡಳಿ ನೇಮಕ ಕಾಳಸಂತೆ ಹಾಗೂ ಅಗತ್ಯ ವಸ್ತುಗಳ ಸರಬರಾಜು ನಿಯಂತ್ರಣ ಕಾಯಿದೆ ಅನುಷ್ಠಾನಕ್ಕಾಗಿ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಲಹಾ ಮಂಡಳಿ ರಚಿಸಲಾಗಿದೆ. ನ್ಯಾ.ಅಶೋಕ್ ಹಿಂಚಿಗೇರಿ ಅವರು ಅಧ್ಯಕ್ಷರಾಗಿದ್ದು, ನ್ಯಾ.ಎಸ್.ಎನ್.ಸತ್ಯನಾರಾಯಣ, ನ್ಯಾ.ಆರ್.ಬಿ.ಬೂದಿಹಾಳ ಮಂಡಳಿಯ ಸದಸ್ಯರಾಗಿರುತ್ತಾರೆ. ಇನ್ನು ಮುಂದೆ ಈ ಕಾಯಿದೆ ಮೂಲಕ ಬಂಧನಕ್ಕೊಳಗಾಗುವ ಎಲ್ಲ ಆರೋಪಿಗಳ ವಿಚಾರಣೆ ಈ ಮಂಡಳಿಯಲ್ಲೇ ಆಗುತ್ತದೆ.