ಅತ್ಯಾಚಾರ ಸಂತ್ರಸ್ತರಿಗೆ 50 ಲಕ್ಷ ಪರಿಹಾರ ಧನ ಬಿಡುಗಡೆ
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರಿಗೆ ಮೀಸಲಿಟ್ಟ ಪರಿಹಾರ ಧನ 50 ಲಕ್ಷ ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಬೆಂಗಳೂರು: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರಿಗೆ ಮೀಸಲಿಟ್ಟ ಪರಿಹಾರ ಧನ 50 ಲಕ್ಷ ಬಿಡುಗಡೆ ಮಾಡಿರುವುದಾಗಿ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಒಂದೇ ದಿನದಲ್ಲಿ 10 ಅತ್ಯಾಚಾರ ಪ್ರಕರಣ ದಾಖಲಾದ ಬಗ್ಗೆ ಕನ್ನಡ ಪ್ರಭ ವರದಿ ಮಾಡಿತ್ತು. ವರದಿ ಆಧಾರದ ಮೇಲೆ, ಸಂತ್ರಸ್ತರಿಗೆ ನಿರ್ಭಯಾ ಯೋಜನೆ ಅಡಿ ಪರಿಹಾರ ಧನ ನೀಡಬೇಕು, ಘಟನೆಗೆ ಒಳಗಾದವರು ದೂರು ನೀಡಲು ತೆರಳಿದ ಸಂದರ್ಭದಲ್ಲಿ ಪೊಲೀಸರು ಠಾಣೆ ವ್ಯಾಪ್ತಿ ಗಣನೆಗೆ ತೆಗೆದುಕೊಳ್ಳದೆ ದೂರು ದಾಖಲಸಿಕೊಳ್ಳಬೇಕು, ಸಂತ್ರಸ್ತರಿಗೆ ಅನುಕೂಲ ಆಗುವಂತಹ ಹಲವು ಅಂಶಗಳನ್ನು ಜಾರಿಗೆ ತರಬೇಕೆಂದು ಮಹಿಳಾ ವಕೀಲರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ಅಶೋಕ್ ಬಿ.ಹಿಂಚಿಗೇರಿ ಪೀಠ, ಬಿಡುಗಡೆ ಆದ ಪರಿಹಾರ ಧನ ಒಂದು ತಿಂಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸಂತ್ರಸ್ತರಿಗೆ ವಿತರಣೆ ಆಗಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ಸಂತ್ರಸ್ತರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ ಹೀಗೆ ವಿವಿಧ ಇಲಾಖೆಗಳಿಂದ ಪರಿಹಾರ ಧನ ವಿತರಣೆ ಆಗುತ್ತಿದೆ. ಇದರಿಂದ ವಿತರಣೆ ಸಂಬಂಧ ಸಾಕಷ್ಟು ಗೊಂದಲ ಸೃಷ್ಟಿ ಆಗುತ್ತಿದ್ದು ಏಕಗವಾಕ್ಷಿ ಆಧಾರದಲ್ಲಿ ವಿತರಣೆ ಆಗುವ ಯೋಜನೆ ರೂಪಿಸಬೇಕು ಎಂದು ಅರ್ಜಿದಾರರು ಪೀಠದ ಗಮನಕ್ಕೆ ತಂದರು.
ವಿದ್ಯಾರ್ಥಿನಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ
ಬೆಂಗಳೂರು: ನಗರದಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತನಿಂದಲೇ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಬಿಬಿಎಂ ವಿದ್ಯಾರ್ಥಿನಿ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬನಶಂಕರಿಯ ಎವಿಕೆ ಕಾಲೇಜಿನಲ್ಲಿ 2ನೇ ವರ್ಷದ ಬಿಬಿಎಂ ವ್ಯಾಸಾಂಗ ಮಾಡುತ್ತಿರುವ ನೇಹಾ (ಹೆಸರು ಬದಲಿಸಿದೆ) ದೂರು ನೀಡಿರುವ ವಿದ್ಯಾರ್ಥಿನಿ. ಆರೋಪಿ ವಿಕ್ರಂಸಿಂಗ್ ( 22) ನನ್ನು ಪೋಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಿಹಾರ ಮೂಲದ ಯುವತಿ ವ್ಯಾಸಾಂಗ ಮಾಡುತ್ತಿದ್ದ ಕಾಲೇಜಿನಲ್ಲೇ ರಾಜಸ್ಥಾನ ಮೂಲದ ವಿಕ್ರಂ ಸಿಂಗ್ ವ್ಯಾಸಾಂಗ ಮಾಡುತ್ತಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ಆ. 19 ರಂದು ಬೆಂಗಳೂರಿಗೆ ವಿಕ್ರಂ ಸಿಂಗ್ ತಂದೆ ಆಗಮಿಸಿದ್ದರು. ಅವರನ್ನು ವಿಮಾನ ನಿಲ್ದಾಣದಿಂದ ಕರೆತರಲು ಇಬ್ಬರೂ ಹೊರಟಿದ್ದರು. ತಂದೆ ಬರುವುದು ತಡವಾಗುತ್ತದೆ ಹಾಗಾಗಿ ಮಧ್ಯರಾತ್ರಿವರೆಗೂ ಸಮಯ ಕಳೆಯ ಬೇಕಿರುವುದರಿಂದ ಕಲಾಸಿಪಾಳ್ಯದಲ್ಲಿ ಲಾಡ್ಜ್ ಮಾಡಿ ಮತ್ತೆ ವಿಮಾನ ನಿಲ್ದಾಣಕ್ಕೆ ತೆರಳೋಣ ಎಂದು ಆರೋಪಿ ತಿಳಿಸಿದ್ದಾನೆ. ಆದಕ್ಕೆ ಯುವತಿ ಸಮ್ಮತಿಸಿದ್ದಾಳೆ. ಆದರೆ, ಒಳಹೋದ ನಂತರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಅನುಚಿತ ವರ್ತನೆಯ ಆರೋಪಿಗೆ ಜಾಮೀನು
ಆರ್ಟ್ ಆಫ್ ಲಿವಿಂಗ್ ಶಾಲೆಯ ದೈಹಿಕ ಶಿಕ್ಷಕ ಆರಿಫ್ ಉಲ್ಲಾ ಎಂಬಾತ ವಿದ್ಯಾರ್ಥಿನಿಯರನ್ನು ಲೈಂಗಿಕ ದೃಷ್ಟಿಯಿಂದ ನೋಡಿದ್ದ ಎಂಬ ಕಾರಣಕ್ಕಾಗಿ 'ರಾಜ್ಯ ಮಕ್ಕಳ ಹಕ್ಕುಗಳ ಆಯೋಗ' ಪೋಕ್ಸೊ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠವು ಆತನಿಗೆ ಜಾಮೀನು ನೀಡಿದೆ.
ಪತ್ರಿಕೆಯೊಂದು ಆರಿಫ್ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ವರಿದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿತ್ತು.
ದೂರಿನ ಆಧಾರದ ಮೇಲೆ ಆತನ ವಿರುದ್ಧ 'ಪೋಕ್ಸೊ' ಕಾಯ್ದೆಯಲ್ಲಿನ ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಆತ ಜೈಲು ಪಾಲಾಗಿದ್ದ.
ಪ್ರಕರಣವನ್ನು ಪ್ರಶ್ನಿಸಿ ಶುಕ್ರವಾರ ಆತ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆರ್.ಬಿ.ಬೂದಿಹಾಳ ಅವರ ಪೀಠ, ಆತ ಕೆಟ್ಟ ದೃಷ್ಠಿಯಿಂದ ನೋಡುತ್ತಿದ್ದ ಎಂಬ ದೂರಿದೆಯೇ ಹೊರತು ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರುಗಳಿಲ್ಲ ಎಂದು ಹೇಳಿ ಜಾಮೀನು ನೀಡಿತು.