3 ಭಾಗವಾಗಿ ಬಿಬಿಎಂಪಿ ವಿಭಜನೆ: ನಗರಾಭಿವ್ಛದ್ಧಿ ಇಲಾಖೆ ಸಲಹೆ
ಅಧ್ಯಯನ ನಡೆಸಲು ತಜ್ಞರ ಸಮಿತಿ: ಮುಖ್ಯಮಂತ್ರಿಗೆ ವರದಿ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ಭವಿಷ್ಯದಲ್ಲಿ 'ತ್ರಿಪುರ'ವಾಗಿ ಪರಿವರ್ತಿತವಾದರೂ ಅಚ್ಚರಿ ಇಲ್ಲ...!
ಆಡಳಿತಾನುಕೂಲ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಬೇಕೆಂಬ ಪ್ರಸ್ತಾಪ ಈಗ ತಾರ್ಕಿಕ ಘಟ್ಟಕ್ಕೆ ಬಂದಿದ್ದು, ದೆಹಲಿ ಮಾದರಿಯಲ್ಲಿ ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಭಜಿಸುವುದು ಸೂಕ್ತ ಎಂದು ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯಪಟ್ಟಿದೆ.
ಬಿಬಿಎಂಪಿಯನ್ನು ಎರಡು ಭಾಗವಾಗಿ ವಿಭಜಿಸುವ ಅಗತ್ಯವಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ನಗರಾಭಿವೃದ್ಧಿ ಇಲಾಖೆ ದೆಹಲಿ ಮಾದರಿ ಮಾತ್ರ ಸೂಕ್ತ ಎಂದಿದೆ. ಈ ಸಂಬಂಧ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸುವಂತೆ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಿದೆ.
ತಜ್ಞರ ವರದಿ ಆಧರಿಸಿ ಬೆಂಗಳೂರು ವಿಭಜನೆಗೆ ಸರ್ಕಾರ ಒಪ್ಪಿಗೆ ನೀಡಿದರೆ ದೆಹಲಿಯ ರೀತಿ ಮೂರು ಪಾಲಿಕೆ ಅಸ್ತಿತ್ವಕ್ಕೆ ಬರಲಿದೆ. ಇಡೀ ನಗರದ ಆಡಳಿತ ಮೂರು ಭಾಗಗಳಲ್ಲಿ ನಿರ್ವಹಣೆಗೆ ಒಳಪಡುವುದರಿಂದ ಬೆಂಗಳೂರಿಗರನ್ನು ಆಗಹ ತ್ರಿಪುರವಾಸಿಗಳು ಎಂದು ಕರೆಯಬಹುದು.
ವರದಿಯಲ್ಲಿ ಏನಿದೆ?: ಆಡಳಿತಾತ್ಮಕವಾಗಿ ಬಿಬಿಎಂಪಿಯನ್ನು ವಿಭಜನೆ ಮಾಡುವಂತೆ ಸಚಿವ ರಾಮಲಿಂಗಾರೆಡ್ಡಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ಬಿಬಿಎಂಪಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆಡಳಿತಾರೂಢ ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್, ಜೆಡಿಎಸ್ನಿಂದ ಮಿಶ್ರಪ್ರತಿಕ್ರಿಯೆ ನಗರದ ಐತಿಹಾಸಿಕ ಮಹತ್ವಕ್ಕೆ ಧಕ್ಕೆ ಬರುತ್ತದೆ. ಬಿಬಿಎಂಪಿ ವಿಭಜನೆಗೆ ಇದು ಸಕಾಲವಲ್ಲ ಎಂಬಿತ್ಯಾದಿ ಅಭಿಪ್ರಾಯ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾಧ್ಯಾ ಸಾಧ್ಯತೆ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಕೇಳಿತ್ತು. ದೇಶ-ವಿದೇಶದ ನಗರ-ಸ್ಥಳೀಯ ಸಂಸ್ಥೆಗಳ ಅಧ್ಯಯನ ನಡೆಸಿದ ಅಂತಿಮವಾಗಿ ದೆಹಲಿಮಾದರಿಯನ್ನು ಆಯ್ದುಕೊಂಡಿದೆ.
ಹಿಂದೆ ದೆಹಲಿ ಮುನ್ಸಿಪಲ್ ಕೌನ್ಸಿಲ್ ಎಂದು ಕರೆಯಲ್ಪಡುತ್ತಿದ್ದ ದೆಹಲಿ ಮಹಾನಗರ ಪಾಲಿಕೆಯನ್ನು ಆಡಳಿತ ದೃಷ್ಟಿಯಿಂದ ಈಗ ಉತ್ತರ ದೆಹಲಿ, ದಕ್ಷಿಣ ದೆಹಲಿ ಹಾಗೂ ಪೂರ್ವ ದೆಹಲಿ, ಎಂದು ವಿಭಜಿಸಲಾಗಿದೆ. ಇದರಿಂದ ಆಡಳಿತಾತ್ಮಕವಾಗಿ ಹಲವು ಅನುಕೂಲವಾಗಿರುವುದರಿಂದ ಇದಂ ಮಾದರಿ ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆದರೆ ಈ ವರದಿಯನ್ನೇ ಅಂತಿಮ ಎಂದು ಪರಿಗಣಿಸದೇ ಇನ್ನಷ್ಟು ವಿಶ್ಲೇಷಣೆ ನಡೆಸಲು ತಜ್ಞರ ಸಮಿತಿ ರಚಿಸುವಂತೆ ನಗರಾಭಿವೃದ್ಧಿ ಇಲಾಖೆ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ ಎಂದು ಉನ್ನತ ಮೂಲಗಳು ಕನ್ನಡಪ್ರಭಕ್ಕೆ ಖಚಿತಪಡಿಸಿವೆ.
ಯಾರು ಇರಬೇಕು?
ಸಮಿತಿಯನ್ನು ತುಸು ಎಚ್ಚರಿಕೆಯಿಂದ ರಚಿಸಬೇಕಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಭಿಪ್ರಾಯಪಟ್ಟಿದೆ. ಸಮಿತಿಯಲ್ಲಿ ಕೇವಲ ರಾಜಕಾರಣಿಗಳನ್ನು ಮಾತ್ರ ಸದಸ್ಯರನ್ನಾಗಿ ನೇಮಿಸಬಾರದು. ಇತಿಹಾಸ ತಜ್ಞರು, ಅರ್ಥಶಾಸ್ತರಜ್ಞರು, ಐಎಎಸ್ ಅಧಿಕಾರಿಗಳು, ಮಾಜಿ ಮೇಯರ್ಗಳು, ಶಾಸಕರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಹೇಳಿದೆ ಈ ವಿಭಜನೆ ಸಂದರ್ಭದಲ್ಲಿ ಬೆಂಗಳೂರನ್ನು ಭವಿಷ್ಯದಲ್ಲಿ ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಗುರಿ ಹೊಂದಿರಬೇಕು. ಈಗಿನ ಪರಿಸ್ಥಿತಿಯಲ್ಲಿ ಬೆಂಗಳೂರನ್ನು ಒಂದು ಸುಸಜ್ಜಿತ ನಗರ ಎಂದು ಒಪ್ಪಿಕೊಳ್ಳುವುದು ಕಷ್ಟ. ನಗರ ಸಂಪೂರ್ಣವಾಗಿ ಹಳ್ಳಿಯ ಸ್ವರೂಪದಿಂದ ಹೊರ ಬಂದಿಲ್ಲ. ಪೊಲೀಸಿಂಗ್, ಕರ ಸಂಗ್ರಹಣೆ, ಸಂಚಾರ, ನೀರು ಸರಬರಾಜು, ಒಳಚರಂಡಿ, ವಿದ್ಯುತ್ ವಿತರಣೆ ಇತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟ ಚಿತ್ರಣ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.