ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಹುಚ್ಚುವಾಸಿಯಾದಾಗ ಮನೆ ನೆನಪಾಯ್ತು

10 ವರ್ಷಗಳ ಬಳಿಕ ಮನೆಗೆ ಮರಳಿದ ಮಗ, ದಶಕದ ಬಳಿಕ ಮತ್ತೆ ಸಂಭ್ರಮ

ಈಶ್ವರಮ್ಮಳ ತುಂಬು ಕುಟುಂಬ ಮರಳಿ ಬಂದ ಮಗ ಚಂದ್ರನೊಂದಿಗೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು.
Srinivasa Murthy VN
Updated On : 31 Aug 2014, 9:33 am

-ಶಶಿಧರ್ ಮೇಟಿ
ಬಳ್ಳಾರಿ:
ಗಂಡ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡಳು, ಹುಚ್ಚನಾದ ಮಗನೂ ಕಾಣೆಯಾದ. ಆಸ್ತಿ ಇದ್ದರೂ 64ರ ಇಳಿ ವಯಸ್ಸಿನ ಈಶ್ವರಮ್ಮ ಅನಾಥವಾಗಿದ್ದಳು. 10 ವರ್ಷದ ಹಿಂದೆ ಕಳೆದು ಹೋದ ಮಗ, ಈಗ ಹುಚ್ಚು ವಾಸಿಯಾಗಿ ಮನೆಗೆ ಬಂದಿದ್ದಾನೆ. ದಿಕ್ಕಿಲ್ಲದ ಕುಟುಂಬಕ್ಕೆ, ತಾಯಿಗೆ ಬೆಳಕು ತಂದಿದ್ದಾನೆ.

ಇಡೀ ಕುಟುಂಬಕ್ಕೆ ಇದು ಪುನರ್ಜನ್ಮ! ತಂದೆ ಸತ್ತುಹೋಗಿದ್ದಾನೆ ಎಂದು ತಿಳಿದ ಇಬ್ಬರು ಮಕ್ಕಳಿಗೆ ಗಂಡನನ್ನು ಕಳೆದುಕೊಂಡ ನೋವಿನಲ್ಲಿ ತವರು ಸೇರಿದ್ದ ಹೆಂಡತಿಗೆ ಎಲ್ಲಿಲ್ಲದ ಸಂಭ್ರಮ. ಚಂದ್ರು ಫೋಟೋಕ್ಕೆ ಹಾಕಿದ್ದ ಹಾರ ಕಳಚಿಬಿತ್ತು. ಬಳ್ಳಾರಿ ತಾಲೂಕಿನ ಮಿಂಚೇರಿ ಗ್ರಾಮದ ಈಶ್ವರಮ್ಮ ಕುಟುಂಬದ ನೋವು ಮರೆಸಿದ ಚಂದ್ರುಗೆ ಸುಮಾರು 10-12 ವರ್ಷ ಚಿಕಿತ್ಸೆ ನೀಡಿಸಿದರೂ, ಹುಚ್ಚುವಾಸಿಯಾಗದ ಹಿನ್ನಲೆಯಲ್ಲಿ 2004ರಲ್ಲಿ (ಆಗ ಆತನಿಗೆ 34 ವರ್ಷ ವಯಸ್ಸು) ಶಿರಡಿಗೆ ಹೋದಾಗ ಕಾಣಿಯಾಗಿದ್ದ. ಸಾಕಷ್ಟು ಹುಡುಕಿದರೂ ಸಿಗಲಿಲ್ಲ.

ಮಗ ಹುಚ್ಚನಾಗಿದ್ದರಿಂದ ಸಿಗುವುದು ಕಷ್ಟ. ವರ್ಷಗಳು ಕಳೆದಂತೆ ಇನ್ನೇನು ಮಗ ಸತ್ತಿರುತ್ತಾನೆ ಎಂದುಕೊಂಡು ಆತನ ಫೋಟೋಕ್ಕೆ ಹಾರ ಕೂಡ ಹಾಕಿದ್ದರು. ಕೆಲ ದಿನಗಳ ಹಿಂದೆ 44 ವರ್ಷದ ಮಗ ಚಂದ್ರ ಹುಚ್ಚು ವಾಸಿಯಾಗಿ ತಾಯಿಯ ಮಡಿಲು ಸೇರಿದ್ದಾನೆ. ಕಣ್ಣೀರಿನ ಕುಟುಂಬದಲ್ಲಿ ಸಂತೋಷದ ಬುಗ್ಗೆ ಚಿಮ್ಮಿದೆ.

ಎಲ್ಲಿದ್ದ ಇಷ್ಟು ವರ್ಷ?
ಶಿರಡಿಯಲ್ಲಿ ಕಳೆದುಹೋಗಿದ್ದ ಚಂದ್ರು ಮಹಾರಾಷ್ಟ್ರ ಆಂಧ್ರಪ್ರದೇಶ, ತಮಿಳುನಾಡು ಸುತ್ತಾಡಿ ಕೇರಳಕ್ಕೆ ಹೋಗಿದ್ದಾನೆ. ಅಲ್ಲಿನ ಕೊಟ್ಟಾಯಂ ಎಸ್‌ಎಸ್ ಸಮ್ಮತಿ ಭವನ ಆಶ್ರಮದವರ ಕೈಗೆ ಸಿಕ್ಕಿದ್ದು, ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಹುಚ್ಚು ವಾಸಿಯಾದ ಮೇಲೆ ಯಾವ ಊರು ಎಂದು ಕೇಳಿದಾಗ ವಿವರ ಹೇಳಿದ. ಅದರಂತೆ ಆಶ್ರಮದವರು ಬಂದು ವಿಚಾರಿಸಿ ಈತನವನ್ನು ಮನೆಗೆ ಬಿಟ್ಟು ಹೋಗಿ ದ್ದಾರೆ. ಮಗ ಬದುಕಿದ್ದಾನೆ ಎಂದಾಗ ತಾಯಿಗೆ ನಂಬುವುದೇ ಕಷ್ಟವಾಯಿತು. ಚೌತಿ ಹಬ್ಬಕ್ಕೆಂದು ತವರಿಗೆ ಹೋಗಿದ್ದ ಪತ್ನಿ ನಾಗಮ್ಮ, 16 ವರ್ಷದ ಮಗ ಕಾರ್ತಿಕ್, 12 ವರ್ಷದ ಮಗಳು ಭಾಗ್ಯಮ್ಮಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ದುಃಖದಲ್ಲಿ ಹಾಸಿಗೆ ಹಿಡಿದ ತಾಯಿ ಚೇತರಿಸಿಕೊಂಡಿದ್ದಾಳೆ. ಹಲವು ವರ್ಷಗಳಿಂದ ನಗುವೇ ಇಲ್ಲದ ಕುಟುಂಬದಲ್ಲಿ ಈ ಬಾರಿ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

ನನ್ನ ಬಾಳು ಗಂಡನಿಲ್ಲದೆ ಇಬ್ಬರು ಮಕ್ಕಳನ್ನು ಸಾಕುತ್ತ ಸಾಗಿಸುವಂತಾಯಿತು ಎಂದು ತಿಳಿದುಕೊಂಡಿದ್ದೆ. ಕೊನೆಗೆ ದೇವರ ನನ್ನ ಗಂಡನನ್ನು ನನಗೆ ಮರಳಿ ಕೊಟ್ಟಿದ್ದಾನೆ ಎಂದು ನಾಗಮ್ಮ ಹರ್ಷ ವ್ಯಕ್ತಪಡಿಸಿದರು. ಇಬ್ಬರೂ ಮಕ್ಕಳು ತಂದೆಯ ಎದೆಯೆತ್ತರಕ್ಕೆ ಬೆಳೆದಿದ್ದರೂ, ತೊಡೆಯೇರಿ ಕುಳಿತು ಸಂಭ್ರಮಿಸಿದರು.

ಕರುಳು ಹಿಂಡುವ ಕಥೆ
ಈಶ್ವರಮ್ಮ ದಂಪತಿಗೆ ಎರಡು ಗಂಡು, ಒಂದು ಹೆಣ್ಣುಮಗು. ಸಂಸಾರ ಸುಖವಾಗಿತ್ತು. ದೊಡ್ಡಮಗ ಚಂದ್ರುಗೆ ಮದುವೆಯಾಯಿತು. ಎರಡು ಮಕ್ಕಳಾದ ಮೇಲೆ ಹುಚ್ಚು ಹಿಡಿಯಿತು. ಕೇವಲ 20ರ ವಯಸ್ಸಿನಲ್ಲಿ ಎರಡನೇ ಮಗ ಕ್ಷುಲ್ಲಕ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಇದರಿಂದ ಜರ್ಝರಿತನಾದ ಚಂದ್ರುವಿನ ತಂದೆಯೂ ಆತ್ಮಹತ್ಯೆಗೆ ಶರಣಾದ. ದೊಡ್ಡಮಗ ಚಂದ್ರುವಿನ ಹುಚ್ಚು ಉಲ್ಬಣಿಸಿತು. ಗ್ರಾಮದ ಕಂಡವರಿಗೆ ಕಲ್ಲು ಹೊಡೆಯುವುದು, ಬಡಿಯುವುದು ಮಾಡಿದಾಗ ತಾಯಿ ಈಶ್ವರಮ್ಮ, ಆತನ ಹೆಂಡತಿ ನಾಗಮ್ಮಗೆ ಜನರು ಬೈಯ್ಯ ತೊಡಗಿದರು. ಮನಃಶಾಂತಿಗಾಗಿ ಕುಟುಂಬದ ಸಮೇತ ಶಿರಡಿಗೆ ಹೋದಾಗ ಚಂದ್ರು ಕಳೆದುಹೋದ. ಹೆಂಡತಿ, ಮಕ್ಕಳು ತವರು ಸೇರಿದರು. ಗಾಯದ ಮೇಲೆ ಬರೆ ಎಂಬಂತೆ ಈಶ್ವರಮ್ಮನ ಪುತ್ರಿಯೂ ಕ್ಯಾನ್ಸರ್‌ಗೆ ತುತ್ತಾಗಿ ಇತ್ತೀಚೆಗೆ ಮೃತಪಟ್ಟಳು. ಕುಟುಂಬವಿಡೀ ಸೂತಕದ ಛಾಯೆಯಲ್ಲಿದ್ದಾಗ, 10 ವರ್ಷದ ಹಿಂದೆ ಕಳೆದುಹೋದ ಮಗ ಮನೆಗೆ ಮರಳಿ ದುಃಖ ಮರೆಸಿದ್ದಾನೆ. ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದ ಈಶ್ವರಮ್ಮಗೆ ಪುನರ್ಜನ್ಮ ಬಂದಂತಾಗಿದೆ. ಸತ್ತಿದ್ದಾನೆ ಎಂದು ತಿಳಿದಿದ್ದ ಮಗ ಮತ್ತೆ ಬಂದಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement