ಕಾರ್ತಿಕ್-ಮೈತ್ರಿಯಾ ವಿವಾ(ದ)ಹ: ಡಿವಿಎಸ್ ಪುತ್ರನಿಗೆ ಬಂಧನ ಭೀತಿ
ತನಿಖೆ ಚುರುಕುಗೊಳಿಸಿದ ಪೊಲೀಸರು...
ಬೆಂಗಳೂರು: ನಟಿ ಮೈತ್ರಿಯಾ ಗೌಡ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್‌ಗೌಡ ಅವರಿಗೆ ಬಂಧನ ಭೀತಿ ಎದುರಾಗಿದೆ.
ನಟಿ ಮೈತ್ರಿ ಮತ್ತು ಕಾರ್ತಿಕ್ ಅವರ ವಿವಾಹ ವಿವಾದ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಆರ್.ಟಿ.ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಗಡುವು ನೀಡಿದ್ದಾರೆ. ಕಾರ್ತಿಕ್ ಗೌಡ ಅವರ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ವಂಚನೆ ಆರೋಪದಡಿ ದೂರು ದಾಖಲಿಸಿಕೊಳ್ಳಲಾಗಿತ್ತು. ಇದೀಗ ಬುಧವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ಗೆ ಪೊಲೀಸರು ಸೂಚನೆ ನೀಡಿದ್ದು, ಹಾಜರಾಗದಿದ್ದರೆ ಗುರುವಾರ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಗೌಡ ಅವರಿಗೆ ಕಳೆದ ಶುಕ್ರವಾರವೇ ಆರ್‌ಟಿ ನಗರ ಪೊಲೀಸರು ಕಾರ್ತಿಕ್ ಗೌಡ ಅವರಿಗೆ ನೋಟಿಸ್ ನೀಡಿದ್ದು, ಈ ವರೆಗೂ ಕಾರ್ತಿಕ್ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಪೊಲೀಸರು ಗಡುವು ನೀಡಿದ್ದಾರೆ. ಇದಕ್ಕೂ ಮೊದಲು ನಟಿ ಮೈತ್ರಿಯಾ ಗೌಡ ಅವರನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು ಆಕೆಯ ಹೇಳಿಕೆಯಿಂದ ಕೊಂಚ ಗೊಂದಲಕ್ಕೆ ಒಳಗಾಗಿದ್ದರು. ಗೊಂದಲಮಯ ಹೇಳಿಕೆ ನೀಡುತ್ತಿದ್ದ ಮೈತ್ರಿಯಾ ಅವರನ್ನು ಎರಡೆರಡು ಬಾರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆಯನ್ನು ದಾಖಲು ಮಾಡಿಸಿದ್ದಾರೆ.