ಬೆಂಗಳೂರು: ಮಕ್ಕಳು ಓದಿಗಿಂತ ಆಟದಲ್ಲೇ ಹೆಚ್ಚು ಕಾಲಕಳೆಯುವುದು ಸಹಜ. ಹಾಗಾಗಿ ಮನರಂಜನೆಯೊಂದಿಗೆ ಮಕ್ಕಳು ಪುಸ್ತಕ ಓದುವುದನ್ನು ಉತ್ತೇಜಿಸುವ ಉದ್ದೇಶದಿಂದ ಚೈಲ್ಡ್ ಇಂಡಿಯಾ ವತಿಯಿಂದ 'ಬುಕ್ಸ್ ಮೈ ಫ್ರೆಂಡ್ಸ್ ಇಂಡಿಯಾ' ಆಂದೋಲನವನ್ನು ದೇಶಾದ್ಯಂತ ಆರಂಭಿಸಲಾಗಿದೆ.
ಮ್ಯೂಸಿಯಂ ರಸ್ತೆಯ ಚೈಲ್ಡ್ ಫಂಡ್ ಇಂಡಿಯಾ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡ, ನಿರ್ಗತಿಕ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಆಂದೋಲನಕ್ಕೆ ಚಾಲನೆ ನೀಡಿದರು.
ಚೈಲ್ಡ್ ಫಂಡ್ ಇಂಡಿಯಾ ಗುರುತಿಸಿರುವ ತುಮಕೂರು, ಮೈಸೂರು, ಜಿಲ್ಲೆಯ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ವಿಜ್ಞಾನ, ನೀತಿಕಥೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಪುಸ್ತಕಗಳನ್ನು ನೀಡಲಾಯಿತು. ವಯೋವಾನಕ್ಕೆ ಅನುಗುಣವಾಗಿ ಅಂದರೆ 6ರಿಂದ 14 ವರ್ಷದೊಳಗಿನ ಮಕ್ಕಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ 15 ಬಗೆಯ ಕಥೆ ಪುಸ್ತಕ ವಿತರಿಸಲಾಯಿತು.
ಆಂದೋಲನಕ್ಕೆ ಚಾಲನೆ ನೀಡಿದ ಅನಿಲ್ ಕುಂಬ್ಳೆ ಮಾತನಾಡಿ, ಪಠ್ಯ ಪುಸ್ತಕಗಳನ್ನು ಓದಿದ್ದರೆ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುತ್ತಾರೆ. ಅದರ ಜತೆಗೆ ಅವರು ನೀತಿ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ಪೋಷಕರ ಜವಾಬ್ದಾರಿ. ಓದುವುದು ಎಂದರೆ ಮಕ್ಕಳಿಗೆ ಶಿಕ್ಷೆಯಿದ್ದಂತೆ. ಹಾಗಾಗಿ ಅದರ ಜತೆಗೆ ಮನರಂಜನೆ ನೀಡಬೇಕು. ಆ ನಿಟ್ಟಿನಲ್ಲಿ ಚೈಲ್ಡ್ ಫಂಡ್ ಇಂಡಿಯಾ ಆರಂಭಿಸಿರುವ ಆಂದೋಲನ ಶ್ಲಾಘನೀಯ ಎಂದರು.