ನಗರದಲ್ಲಿ ಜಾರಿಯಾಗಲಿದೆ ನಾಗರಿಕ ಭದ್ರತಾ ಕಾಯ್ದೆ, ನಿಯಮ ಪಾಲಿಸದಿದ್ದರೆ 10 ಸಾವಿರ ದಂಡ
2 ತಿಂಗಳಲ್ಲಿ ಅಳವಡಿಸಿಕೊಳ್ಳದಿದ್ದರೆ ಕಟ್ಟಡಕ್ಕೆ ಬೀಗ, ಪೊಲೀಸರಿಗೆ ಪಾಲಿಕೆ, ಕಂದಾಯ, ಇತರೆ ಇಲಾಖೆಗಳ ಸಹಯೋಗ
-ಮಂಜುನಾಥ್ ನಾಗಲೀಕರ್
ಬೆಂಗಳೂರು: ನೂರಾರು ಜನ ಓಡಾಟ ಇರುವ ಕಚೇರಿ, ಸಂಕೀರ್ಣ, ಮನೆ, ಇತರೆ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ ಎನ್ನುವ ಸಲಹೆಯನ್ನು ಪೊಲೀಸರು ನೀಡುತ್ತಲೇ ಬಂದಿದ್ದಾರೆ. ಇನ್ನು ಕೆಲವು ತಿಂಗಳಲ್ಲಿ ಇದು ಸಲಹೆಯಾಗಿ ಉಳಿಯುವುದಿಲ್ಲ. ಬದಲಿಗೆ ಕಡ್ಡಾಯವಾಗಲಿದೆ. ಇದನ್ನು ಪಾಲಿಸದಿದ್ದರೆ 5 ಸಾವಿರದಿಂದ 10 ಸಾವಿರದವರೆಗೂ ದಂಡ ಕಟ್ಟಬೇಕಾಗುತ್ತದೆ.
ಹೌದು, ನಗರದಲ್ಲಿ ಹೈದರಾಬಾದ್ ಮಾದರಿಯ ನಾಗರೀಕ ಭದ್ರತಾ ಕಾಯ್ದೆ ಜಾರಿಗೆ ಬಂದಲ್ಲಿ 100ಕ್ಕೂ ಅಧಿಕ ಜನರ ಓಡಾಟವಿರುವ ಎಲ್ಲ ಕೇಂದ್ರಗಳಲ್ಲೂ ಸಿಸಿಕ್ಯಾಮೆರಾ ಕಡ್ಡಾಯವಾಗಿ ಹಾಕಬೇಕಾಗುತ್ತದೆ. ಅಲ್ಲದೇ, ಸಿಸಿ ಕ್ಯಾಮೆರಾ ದೃಶ್ಯಗಳ ಬ್ಯಾಕಪ್ ಸಾಮರ್ಥ್ಯ ಕನಿಷ್ಟ 1 ತಿಂಗಳು ಇರಲೇಬೇಕು. ಪೊಲೀಸ್ ಇಲಾಖೆ ಮಾತ್ರವಲ್ಲದೇ, ಪಾಲಿಕೆ, ಕಂದಾಯ ಇಲಾಖೆ ಹಾಗೂ ಇನ್ನಿತರೆ ಇಲಾಖೆಗಳ ಸಹಯೋಗದಲ್ಲಿ ಕಾಯ್ದೆ ಒಂದು ಸ್ವರೂಪ ಪಡೆದುಕೊಳ್ಳಲಿದೆ. ವಿಭಾಗೀಯ ಸಮಿತಿ ಹಾಗೂ ಉಸ್ತುವಾರಿ ಸಮಿತಿ ರಚಿಸಲಾಗುತ್ತದೆ. ಕಾಯ್ದೆ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ದಂಡ ಸೇರಿದಂತೆ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸಲಾಗುತ್ತದೆ.
ಆಂಧ್ರಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿರುವ ಅಂಶಗಳ ಸೇರ್ಪಡೆ, ಜತೆಗೆ ತಜ್ಞರ ಸಲಹೆಯೊಂದಿಗೆ ಇನ್ನಷ್ಟು ಮಾರ್ಪಾಡು ಮಾಡಿಕೊಂಡು ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುತ್ತದೆ. ಅಲ್ಲಿ ಅನುಮೋದನೆಯಾದ ಮೇಲೆ ಕಾಯ್ದೆ ಜಾರಿಯಾಗಲಿದೆ.
ಕಾಯ್ದೆ ವ್ಯಾಪ್ತಿಗೆ ಬರುವ ಕಟ್ಟಡಗಳು, ಕೇಂದ್ರಗಳು
ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ಅಪಾರ್ಟ್‌ಮೆಂಟ್, ಧಾರ್ಮಿಕ ಕೇಂದ್ರಗಳು, ಆಸ್ಪತ್ರೆಗಳು, ಶಿಕ್ಷಣ ಕೇಂದ್ರಗಳು, ಕ್ರೀಡಾ ಸಂಕೀರ್ಣಗಳು, ಬಸ್, ರೈಲು ನಿಲ್ದಾಣಗಳು, ಮಾಲ್‌ಗಳು, ಮನೋರಂಜನಾ ಕೇಂದ್ರಗಳು, ಚಿತ್ರಮಂದಿರಗಳು
ಸುರಕ್ಷತಾ ಕ್ರಮಗಳು
ಪ್ರತಿ ಕೇಂದ್ರದ ಪ್ರವೇಶ, ನಿರ್ಗಮನ ಹಾಗೂ ಪಾರ್ಕಿಂಗ್ ಜಾಗದಲ್ಲಿ ಕಡ್ಡಾಯ ಸಿಸಿ ಕ್ಯಾಮೆರಾ
ಸಿಸಿ ಕ್ಯಾಮೆರಾ ದೃಶ್ಯಗಳ ಮೇಲೆ ನಿಗಾ ಇರಿಸಲು ಸಿಬ್ಬಂದಿ
ವಿಡಿಯೋ ಬ್ಯಾಕಪ್ ಕನಿಷ್ಟ 30 ದಿನ ಇರಬೇಕು
ಗುಣಮಟ್ಟದ ಕ್ಯಾಮೆರಾ ಹಾಗೂ ಉಪಕರಣಗಳ ಬಳಕೆ
ಕೇಂದ್ರ, ಮಾಲೀಕ, ವ್ಯವಸ್ಥಾಪಕರ ಉಸ್ತುವಾರಿಯಲ್ಲಿ ಉಪಕರಣಗಳ ಸುಸ್ಥಿತಿ ಬಗ್ಗೆ ಪ್ರತಿ 6 ತಿಂಗಳಿಗೊಮ್ಮೆ ಪರಿಶೀಲನೆ
ಉಲ್ಲಂಘನೆಗೆ ಎಷ್ಟು ದಂಡ
ಮೊದಲನೇ ತಿಂಗಳು-5 ಸಾವಿರ ದಂಡ
ಎರಡನೇ ತಿಂಗಳು-10 ಸಾವಿರ ದಂಡ
2 ತಿಂಗಳಲ್ಲಿ ಅಳವಡಿಸಿಕೊಳ್ಳದಿದ್ದರೆ ಧಾರ್ಮಿಕ ಕೇಂದ್ರ ಹೊರತು ಪಡಿಸಿ ಎಲ್ಲ ಕಟ್ಟಡಗಳಿಗೆ ತಾತ್ಕಾಲಿಕ ಬೀಗ, ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆ
ಪೊಲೀಸರ ಕರ್ತವ್ಯವೇನು?
ಕಾಯ್ದೆ ವ್ಯಾಪ್ತಿಯಲ್ಲಿ ಬರುವ ಕಟ್ಟಡದಲ್ಲಿರುವ ಸಿಸಿಕ್ಯಾಮೆರಾ ಕಾರ್ಯ ನಿರ್ವಹಣೆಯನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಇನ್ಸ್‌ಪೆಕ್ಟರ್ ಪರಿಶೀಲಿಸಬೇಕು. ಉಲ್ಲಂಘನೆ ಕಂಡುಬಂದರೆ, ಎಸಿಪಿ ಹಾಗೂ ಮೇಲಿನ ಅಧಿಕಾರಿಗಳಿಗೆ ವರದಿ ನೀಡಬೇಕು.
ವ್ಯಾಪ್ತಿಯ ಶೇ.10 ರಷ್ಟು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ಪೊಲೀಸ್ ಇನ್ಸ್‌ಪೆಕ್ಟರ್ ಎಸಿಪಿಗೆ ವರದಿ ಸಲ್ಲಿಸಬೇಕು.
ಸಿಸಿಕ್ಯಾಮೆರಾ ಅಳವಡಿಸದಿದ್ದರೆ ಷೋಕಾಸ್ ನೋಟಿಸ್ ನೀಡಿ 15 ದಿನಗಳ ಕಾಲಾವಕಾಶ ನೀಡಬೇಕು.
ಅಧಿಕಾರಿಗಳಿಂದ ಪರಿಶೀಲನೆ
ಕಂದಾಯ, ಪೊಲೀಸ್ ಹಾಗೂ ಪಾಲಿಕೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಕಟ್ಟಡದ ಅಥವಾ ಪ್ರದೇಶದಲ್ಲಿ ಜನರ ಓಡಾಟ ಹೇಗಿದೆ, ಸ್ಥಳಕ್ಕೆ ಭದ್ರತೆ ಹಾಗೂ ಸಿಸಿ ಕ್ಯಾಮೆರಾ ಅವಶ್ಯವಿದೆಯೇ, ಅಪರಾಧಿಗಳ ಕಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆಯೇ ಎನ್ನುವುದನ್ನು ನಿರ್ಧರಿಸುತ್ತಾರೆ. ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದಲ್ಲಿ ಸುರಕ್ಷತೆ ಕ್ರಮಗಳ ನೇತೃತ್ವ ವಹಿಸವುದು ಹೇಗೆ, ಯಾರು ಎಂಬ ಬಗ್ಗೆ ಸಲಹೆಗಳನ್ನು ನೀಡುತ್ತಾರೆ.
(ಮಾಹಿತಿ: ಆಂಧ್ರಪ್ರದೇಶ ನಾಗರೀಕ ಸುರಕ್ಷತಾ ಕಾಯ್ದೆ-2012)
ಕಾಯ್ದೆ ಸಮಗ್ರವಾಗಿರಲಿ
ನಾಗರೀಕ ಸುರಕ್ಷತಾ ಕಾಯ್ದೆ ನಗರಕ್ಕೆ ಅತ್ಯಗತ್ಯ. ಆದರೆ ಹೆಚ್ಚು ಜನ ಇರುವ ಪ್ರದೇಶದಲ್ಲಿ ಕೇವಲ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದಷ್ಟೇ ಗುರಿಯಾಗಿದ್ದರೆ ಇದು ನಾಗರಿಕರ ಸಂಪೂರ್ಣ ಸುರಕ್ಷತೆಯ ಉದ್ದೇಶವನ್ನು ಪೂರೈಸುವುದಿಲ್ಲ. ಬದಲಿಗೆ ನಾಗರೀಕರಿಗೆ ಯಾವ ಸಂದರ್ಭದಲ್ಲಿ ಯಾವ ರೀತಿಯ ಸುರಕ್ಷತೆ ನೀಡಬೇಕು ಎಂಬುದನ್ನು ಮತ್ತು ವಸತಿ ಸಂಕೀರ್ಣಗಳ ಜವಾಬ್ದಾರಿಗಳನ್ನೂ ಇದರಲ್ಲಿ ಸೇರಿಸಬೇಕು.
ಅಷ್ಟೇ ಅಲ್ಲ, ವಸತಿ ಪ್ರದೇಶಗಳಲ್ಲಿ ಸುರಕ್ಷತೆಗೆ ಗಮನ ಹರಿಸುವ ಜತೆಗೆ ರಸ್ತೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಎಲ್ಲ ರೀತಿಯ ಸಾರ್ವಜನಿಕ ಸ್ಥಳಗಳೂ ನಾಗರಿಕರಿಗೆ ಸುರಕ್ಷಿತವಾಗಿರಬೇಕು. ಆ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ. ಸಮಗ್ರ ಸಂರಕ್ಷಣೆಯ ಕಾಯ್ದೆ ಇದಾಗಬೇಕಿದೆ ಎಂದು ತಜ್ಞರು ಹಾಗೂ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.