ಬೆಂಗಳೂರು: ಶೀಘ್ರದಲ್ಲಿಯೇ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೊಸ ವರ್ಷಾಚರಣೆ ಸನಿಹದಲ್ಲಿರುವಂತೆಯೇ ಗ್ರಾಹಕರಿಗೆ ಶಾಕ್ ನೀಡಲು ಕೆಎಂಎಫ್ ಮುಂದಾಗಿದ್ದು, ಶೀಘ್ರದಲ್ಲಿಯೇ ಹಾಲಿನ ದರ ಏರಿಕೆ ಮಾಡುವ ಕುರಿತು ರಾಜ್ಯಸರ್ಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಿಕೊಟ್ಟಿದೆ. ಮೂಲಗಳ ಪ್ರಕಾರ ಕೆಎಂಎಫ್ ಸರ್ಕಾರದ ಮುಂದಿಟ್ಟಿರುವ ಪ್ರಸ್ತಾಪದಲ್ಲಿ ಪ್ರತೀ ಲೀಟರ್ ಹಾಲಿನ ಬೆಲೆಯಲ್ಲಿ 2 ರಿಂದ 3 ರು. ಏರಿಕೆ ಮಾಡಬೇಕು ಎಂದು ಕೇಳಿದೆ.
3 ದಿನಗಳ ಹಿಂದೆ ನಡೆದ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಆಡಳಿತ ಮಂಡಳಿ ಸಭೆಯಲ್ಲಿ ದರ ಏರಿಕೆ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರಕ್ಕೆ ದರ ಹೆಚ್ಚಳ ಕುರಿತು ಪ್ರಸ್ತಾವನೆಯನ್ನು ರವಾನೆ ಮಾಡಲಾಗಿದೆ. ಸಿಬ್ಬಂದಿ ವೇತನ, ಸಾರಿಗೆ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳು ದುಬಾರಿಯಾಗುತ್ತಿದ್ದು, ದರ ಏರಿಕೆ ಅನಿವಾರ್ಯ ಎಂದು ಪ್ರಸ್ತಾಪದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಲಾಗಿದೆ. ಹಾಲಿನ ಉತ್ಪನ್ನದಿಂದ ಬರುವ ಲಾಭಕ್ಕಿಂತ ನಿರ್ವಹಣಾ ವೆಚ್ಚವೇ ಹೆಚ್ಚಾಗಿದೆ ಎಂದು ಕೆಎಂಎಫ್ ಹೇಳಿದೆ. ಹೀಗಾಗಿ ಪ್ರತೀ ಲೀಟರ್ ಹಾಲಿನ ದರದಲ್ಲಿ ಕನಿಷ್ಟ 2 ರಿಂದ 3 ರು.ಗಳನ್ನು ಹೆಚ್ಚಿಸಬೇಕು ಎಂದು ಕೆಎಂಎಫ್ ಮನವಿ ಮಾಡಿಕೊಂಡಿದೆ.
2013 ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಇದೇ 2014 ಸೆಪ್ಟೆಂಬರ್ 17ರಂದು ಪಿ.ನಾಗರಾಜ್ ಅವರು ಕೆಎಂಎಫ್ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಹಾಲಿನ ದರ ಏರಿಕೆ ಮಾಡಲಾಗುತ್ತಿದೆ. ಕೆಎಂಎಫ್ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಒಪ್ಪಿದರೆ ಇದೇ ಜನವರಿ 1ರಿಂದ ನೂತನ ದರ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.