ರಾಜ್ಯ ಹೂಡಿಕೆ ವಲಯದಿಂದ ಹೊರಟ ಇನ್ಫೋಸಿಸ್
ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತ..
ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತ ಐಟಿ ದಿಗ್ಗಜ, ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರ ಸ್ಥಳಾಂತರಕ್ಕೆ ನಿರ್ಧಾರ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತ ಪ್ರತಿಷ್ಠಿತ ಕಂಪನಿಗಳು ರಾಜ್ಯದಿಂದ ಕಾಲು ತೆಗೆಯುತ್ತಿದ್ದು, ಇದೀಗ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್)ದಿಂದ ಹೊರ ಹೋಗಲು ಇನ್ಫೋಸಿಸ್ ಸಂಸ್ಥೆ ಸಹ ನಿರ್ಧರಿಸಿದೆ.
ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆದ ಐಟಿಐಆರ್ನಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಇನ್ಫೋಸಿಸ್ ನಿರ್ಧರಿಸಿತ್ತು. ಆದರೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೆಐಎಡಿಬಿಯ ಭೂ ಸ್ವಾಧೀನ ಧೋರಣೆಯಿಂದ ಆತಂಕಕ್ಕೊಳಗಾಗಿರುವ ಭಾರತದ ಎರಡನೇ ಅತಿದೊಡ್ಡ ಉದ್ಯಮ ಇನ್ಫೋಸಿಸ್, ಕರ್ನಾಟಕದಿಂದ ಸಾಫ್ಟ್ವೇರ್ ಅಭಿವೃದ್ದಿ ಕೇಂದ್ರವನ್ನು ಬೇರೆಡೆಗೆ ವರ್ಗಾಯಿಸಲು ನಿರ್ಧರಿಸಿದೆ. ಇದಲ್ಲದೇ ಕೆಐಎಡಿಬಿಯಲ್ಲಿ ಇರಿಸಿದ್ದ ಭದ್ರತಾ ಠೇವಣಿ 72 ಕೋಟಿ ರು.ಗಳನ್ನು ಸಹ ಹಿಂತಿರುಗಿಸುವಂತೆ ಕೈಗಾರಿಕಾ ಇಲೆಖೆ ಪ್ರಧಾನ ಕಾರ್ಯದರ್ಶಿಗೆ ಇನ್ಫೋಸಿಸ್ ಪತ್ರ ಬರೆದಿದೆ.
ಹೀರೋ ಕಂಪನಿ ಕರ್ನಾಟಕದಿಂದ ಹಿಂದೆ ಸರಿದು ಆಂಧ್ರದಲ್ಲಿ ಹೂಡಿಕೆ ಮಾಡಿದ ಬಳಿಕ ರಾಜ್ಯ ಕೈಗಾರಿಕಾ ವಲಯಕ್ಕೆ ಆಗುತ್ತಿರುವ ಮತ್ತೊಂದು ದೊಡ್ಡ ಆಘಾತ ಇದಾಗಿದೆ. ಇನ್ಫೋಸಿಸ್ ಕೂಡ ಆಂಧ್ರ ಪ್ರದೇಶದತ್ತ ವಾಲುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಸುಮಾರು 20 ಸಾವಿರ ಉದ್ಯೋಗಾವಕಾಶ ರಾಜ್ಯದ ಕೈತಪ್ಪಲಿದೆ. ಈ ಬಗ್ಗೆ ಇನ್ಫೋಸಿಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡದಿದ್ದರೂ ರಾಜ್ಯದಿಂದ ಹಿಂದೆ ಸರಿಯುವ ನಿರ್ಧಾರವನ್ನು ಖಾತ್ರಿ ಪಡಿಸಿದೆ. ಏತನ್ಮಧ್ಯೆ ನ.6ರಂದು ಇನ್ಫೋಸಿಸ್ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಭೆ ಕರೆದಿದ್ದಾರೆ.
ಸಹಿಸದ ವಿಳಂಬ: ಮಾಹಿತಿ ತಂತ್ರಜ್ಞಾನ ಹೂಡಿಕಾ ವಲಯದಲ್ಲಿ ಬಂಡವಾಳ ಹೂಡಲು 2010ರಲ್ಲಿ ಇನ್ಫೋಸಿಸ್ ನಿರ್ಧರಿಸಿತ್ತು. ಸಂಸ್ಥೆಯಿಂದ 72 ಕೋಟಿ ರು.ಗಳನ್ನು ಠೇವಣಿ ಇರಿಸಿಕೊಂಡು ಇನ್ಫೋಸಿಸ್ಗೆ ಕೆಐಎಡಿಬಿ ಭರಿಸಿತ್ತು. ಆದರೆ ಪ್ರಾಥಮಿಕವಾಗಿ ನೀಡಿದ್ದ 40 ಏಕರೆಗೂ ಸರ್ಕಾರ ಯಾವುದೇ ಮೂಲಭೂತ ಸೌಕರ್ಯ ಒದಗಿಸಲಿಲ್ಲ. ಇದಲ್ಲದೇ ಬಾಕಿ ಉಳಿದಿದ್ದ 60 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ನೀಡಿರಲಿಲ್ಲ. ಭೂಸ್ವಾಧೀನಕ್ಕೆ ಸ್ಥಳೀಯ ರೈತರ ವಿರೋಧವಿದಿದ್ದೇ ರಾಜ್ಯ ಸರ್ಕಾರಕ್ಕೆ ಮುಳುವಾಯಿತು.
ವಿಭಜನೆ ಮುಳ್ಳಾಯಿತೇ?
ರಾಜ್ಯದಲ್ಲಿ ಉದ್ಯಮ ಅಭಿವೃದ್ಧಿ ಹಾಗೂ ಹೂಡಿಕೆಗೆ ನೆರೆಯ ಆಂಧ್ರ ಪ್ರದೇಶ ವಿಭಜನೆಯಾಗಿದ್ದೇ ಮುಳ್ಳಾಯಿತೇ? ಹೌದು ಎನ್ನುತ್ತವೆ ಮೂಲಗಳು. ಅದರಿಂದಲೇ ರಾಜ್ಯದಿಂದ ಸಾಕಷ್ಟು ಉದ್ಯಮಿಗಳು ಹೊರ ಹೋಗುತ್ತಿದ್ದಾರೆ. ಬಂಡವಾಳ ಹೂಡಿಕೆಗೆ ಹಿಂದೆ ಅಸ್ತು ಎಂದಿದ್ದ ಕಂಪನಿಗಳು ಕೆಲವು ಕಾರಣಗಳನ್ನು ನೀಡಿ ನೆರೆಯ ಆಂಧ್ರದಲ್ಲಿ ತಮ್ಮ ನೆಲೆ ಕಂಡುಕೊಳ್ಳುತ್ತಿವೆ. ಏಕೆಂದರೆ ವಿಭಜಿತ ಆಂಧ್ರದ ಎರಡೂ ರಾಜ್ಯಗಳಲ್ಲಿ ರಿಯಾಯಿತಿಗಳು ಶೇ.100 ರಷ್ಟಿದೆ.
ರಾಷ್ಟ್ರದಲ್ಲಿ ರಾಜ್ಯವೊಂದರ ವಿಭಜನೆಯಾದರೆ ಆ ರಾಜ್ಯಗಳಿಗೆ ತೆರಿಗೆ ರಿಯಾಯಿತಿ ಸೇರಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ. ಇಂಥ ಸೌಲಭ್ಯ ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ. ಹೀಗಾಗಿ, ಉದ್ಯಮಿಗಳು ಇಲ್ಲಿ ಸೌಲಭ್ಯಗಳು ಸಿಕ್ಕರೂ ಅದಕ್ಕೆ ಹಣ ಹಾಗೂ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇಂಥ ಸೌಲಭ್ಯ ನಮ್ಮ ರಾಜ್ಯದಲ್ಲಿ ಸಾಧ್ಯವಿಲ್ಲ. ಹೀಗಾಗಿ, ಉದ್ಯಮಿಗಳು ಇಲ್ಲಿ ಸೌಲಭ್ಯಗಳು ಸಿಕ್ಕರೂ ಅದಕ್ಕೆ ಹಣ ಹಾಗೂ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಉದ್ಯಮಗಳು ಆಂಧ್ರಕ್ಕೆ ವಲಸೆ ಹೋಗಲು ಇದೆಲ್ಲ ಕಾರಣ ಎನ್ನಲಾಗಿದೆ.
ನಡುಕ ಹುಟ್ಟಿಸಿದ ನಾಯ್ಡು?
ರಾಜ್ಯದಿಂದ ಒಂದಾದ ಮೇಲೊಂದು ಕಂಪನಿಗಳು ಹೊರಹೋಗುತ್ತಿರುವ ಸಂದರ್ಭದಲ್ಲೇ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದ ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ. ಒಂದು ತಿಂಗಳಲ್ಲಿ ಎಲ್ಲ ಅನುಮತಿ ನೀಡುತ್ತೇನೆ, ಇಲ್ಲವಾದಲ್ಲಿ ಒಪ್ಪಿಗೆ ದೊರೆತಿದೆ ಎಂದು ಭಾವಿಸಬಹುದು. ಆಂಧ್ರದಲ್ಲಿ ನಿಮಗೆ ಬೇಕಾದ ಸವಲತ್ತು ನೀಡುತ್ತೇವೆ. ಕಡಿಮೆಯಾದಲ್ಲಿ ಬಂದು ಕೇಳಿ ಎಂದು ಉದ್ಯಮಿಗಳಗೆ ಆಹ್ವಾನ ನೀಡಿರುವ ಬಾಬು, ಸಿದ್ದರಾಮಯ್ಯ ಸರ್ಕಾರಕ್ಕೆ ನಡುಕ ಹುಟ್ಟಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರಕ್ಕೆ ಈ ಬಗ್ಗೆ ಇನ್ಫೋಸಿಸ್ ಸಂಸ್ಥೆ ಮನವಿ ಸಲ್ಲಿಸಿತ್ತು. ಆದರೆ ಹಿಂದಿನ ಹಾಗೂ ಪ್ರಸಕ್ತ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಪರಿಣಾಮ ಇನ್ಫೋಸಿಸ್ನ ಎರಡನೇ ದೊಡ್ಡ ಕ್ಯಾಂಪಸ್ ಬೆಂಗಳೂರಿನಲ್ಲಿ ಆರಂಭವಾಗುವುದು ನಿಲ್ಲುತ್ತಿದೆ.
ನಿದ್ದೆಯಿಂದ ಎದ್ದ ಸರ್ಕಾರ:
ಹೀರೋ ಕಂಪನಿ ರಾಜ್ಯದಿಂದ ಗುಳೆ ಹೊರಟ ಮೇಲೆ ಪ್ರಧಾನಿಗೆ ಪತ್ರ ಬರೆದು ಸುಮ್ಮನಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿಐಆರ್ ಯೋಜನೆ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಐಟಿಐಆರ್ ಕೂಡ ರಾಜ್ಯದ ಕೈ ತಪ್ಪಲಿದೆ ಎಂಬ ವದಂತಿ ಹಬ್ಬಿತ್ತು. ಈತನ್ಮಧ್ಯೆ ಇನ್ಫೋಸಿಸ್ನ ಮೂಲ ಸೌಕರ್ಯ ಅಭಿವೃದ್ಧಿ ಬೇಡಿಕೆಗೆ ಸ್ಪಂದಿಸಲು ರಾಜ್ಯ ಈಗ ಮುಂದಾಗಿದೆ. ದ್ವಿಪಥ ರಸ್ತೆಯನ್ನು ಚತುಷ್ಪತ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಐಟಿಬಿಟಿ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ. ಆದರೆ ಯಾವು ನಿರ್ದಿಷ್ಟ ಸಮಯದಲ್ಲಿ ಬೇಡಿಕೆ ಈಡೇರಿಸಲಾಗುವುದು ಎನ್ನುವುದಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ.