ಸಮಾಜ ಸೇವಕ ಮಹೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಬೆಂಗಳೂರು: ಗೋ ಸಂರಕ್ಷಣೆ ಜಾಗೃತಿ ಕಾರ್ಯಗಳು, ಸಮಾಜ ಸೇವೆ ಮಾಡುತ್ತಿದ್ದ ಮಹೇಂದ್ರ ಮನೋತ್ ಸೇರಿದಂತೆ ನಾಲ್ವರ ಮೇಲೆ 50ಕ್ಕೂ ಅಧಿಕ ಜನರ ಗುಂಪು ಗಂಗೋಂಡನ ಹಳ್ಳಿಯ ಖಾಸಗಿ ಶಾಲೆ ಸಮೀಪ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ದಾಳಿ ನಡೆಸಿದೆ.
ತೀವ್ರ ಗಾಯಗೊಂಡಿರುವ ಮಹೇಂದ್ರ ಅವರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಬೆಳಗ್ಗೆ ಮಹೇಂದ್ರ ಅವರು ಗಂಗೊಂಡನ ಹಳ್ಳಿಯಲ್ಲಿರುವ ಎಂಎಂಐ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ಹಂಚಲು ಹೋಗಿದ್ದರು. ಇವರ ಜತೆ ಕಾರು ಚಾಲಕ ಉಪೇಂದ್ರ, ರಾಕೇಶ್ ಹಾಗೂ ಮತ್ತೊಬ್ಬರು ಇದ್ದರು.
ನೋಟ್ ಪುಸ್ತಕಗಳನ್ನು ವಿತರಿಸಿದ ಮಹೇಂದ್ರ ಅವರು ತಮ್ಮ ಜತೆಗಿದ್ದವರೊಂದಿಗೆ 12 ಗಂಟೆ ಸುಮಾರಿಗೆ ಕಾರು ಹತ್ತಿ ಹೊರಡಲನುವಾಗುವಾಗ ಏಕಾಏಕಿ 50ಕ್ಕೂ ಹೆಚ್ಚು ಜನರಿದ್ದ ಗುಂಪು ಮಾರಕಾಸ್ತ್ರಗಳು ಹಾಗೂ ಕಲ್ಲುಗಳನ್ನು ಹಿಡಿದುಕೊಂಡು ದಾಳಿ ನಡೆಸಿದೆ. ಪರಿಣಾಮ ಮಹೇಂದ್ರ ಹಾಗೂ ಕಾರು ಚಾಲಕನ ಮುಖ ಕೈ ಸೇರಿದಂತೆ ದೇಹದ ಇತರ ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಆಗ ಅಲ್ಲೇ ಇದ್ದ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಮಹೇಂದ್ರರನ್ನು ತಕ್ಷಣ ಶಾಲೆಯ ಕಚೇರಿಯೊಳಗೆ ಒಯ್ದು ಬಾಗಿಲು ಹಾಕಿದ್ದಾರೆ.
ಈ ವೇಳೆ ದುಷ್ಕರ್ಮಿಗಳು ಶಾಲೆಯ ಕಚೇರಿವರೆಗೂ ಬಂದು ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿದ ಚಂದ್ರ ಬಡಾವಣೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಮಹೇಂದ್ರ ಇತರೆ ಮೂವರನ್ನು ಅವರ ಸ್ನೇಹಿತರ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.