ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಾರವಾರದ ಬಂದರು ಸಮೀಪ ಮುಳುಗಿದ ಟಗ್ ಬೋಟ್

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನ ಸಮೀಪ ಟಗ್ ಬೋಟ್ ನೀರಿನಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ಐವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.

ಸಾಂದರ್ಭಿಕ ಚಿತ್ರ
Srinivasa Murthy VN
Updated On : 6 Oct 2014, 8:47 am

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನ ಸಮೀಪ ಟಗ್ ಬೋಟ್ ನೀರಿನಲ್ಲಿ ಮುಳುಗಡೆಯಾಗಿದ್ದು, ಬೋಟ್‌ನಲ್ಲಿದ್ದ ಐವರು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ.

ಮಲ್ಲಿಕಾರ್ಜುನ ಶಿಪ್ಪಿಂಗ್ ಸಂಸ್ಥೆಗೆ ಸೇರಿದ ಕೆಬಿ-15 ಹೆಸರಿನ ಟಗ್ ಬೋಟ್ ದುರಂತಕ್ಕೀಡಾಗಿದ್ದು, ತಕ್ಷಣವೇ ತುರ್ತು ಕಾರ್ಯಾಚರಣೆ ನಡೆಸಿದ ಕರಾವಳಿ ಕಾವಲುಪಡೆಯ ಸಿಬ್ಬಂದಿಗಳು ಬೋಟ್ ನಲ್ಲಿದ್ದ ಐವರು ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ. ಕಾರವಾರ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್ ಇಂದು ಬೆಳಗ್ಗೆ 11 ಗಂಟೆಯ ಸುಮಾರಿನಲ್ಲಿ ಸಿಂಗಾಪುರದಿಂದ ಆಗಮಿಸಿದ್ದ ಹಡಗೊಂದನ್ನು ವಾಪಸ್ ಸಮುದ್ರಕ್ಕೆ ಎಳೆದೊಯ್ಯುವಾಗ ಟಗ್‌ಬೋಟ್‌ನ ಛಾವಣಿ ಕತ್ತರಿಸಿದೆ. ಈ ವೇಳೆ ಉಂಟಾದ ಒತ್ತಡದಿಂದಾಗಿ ಬೋಟ್ ಸಮುದ್ರದಲ್ಲಿ ಪಲ್ಟಿ ಹೊಡೆದಿದ್ದು, ನೀರಿನಲ್ಲಿ ಮುಳುಗಿದೆ.

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಬೋಟ್‌ನಲ್ಲಿದ್ದ ಐವರು ಸಿಬ್ಬಂದಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ  ಪ್ರಕರಣ ದಾಖಲಿಸಿಕೊಂಡಿರುವ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮುಳುಗಡೆಗೊಂಡ ಬೋಟ್ ಅನ್ನು ಹೇಗೆ ದಡಕ್ಕೆ ತರಬೇಕು ಎನ್ನುವ ಕುರಿತು ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ.

ಸಾಮಾನ್ಯವಾಗಿ ಬಂದರಿಗೆ ಬರುವ ದೊಡ್ಡ ಹಡಗುಗಳನ್ನು ಆಳ ಕಡಿಮೆ ಇರುವ ಸ್ಥಳದಲ್ಲಿ ನಿಲ್ಲಿಸಲಾಗುತ್ತದೆ. ಇದಕ್ಕಾಗಿ ಹಡಗಿನ ಎಂಜಿನ್‌ಗಳನ್ನು ಸ್ಥಗಿತಗೊಳಿಸಿದ ಬಳಿಕ ಟಗ್ ಬೋಟ್ ಗಳ ಮೂಲಕ ಆಳ ಕಡಿಮೆ ಇರುವ ಸ್ಥಳಗಳಿಗೆ ಎಳೆದೊಯ್ಯಲಾಗುತ್ತದೆ. ಬಂದರಿಗೆ ಆಗಮಿಸುವ ಭಾರಿ ಹಡಗುಗಳನ್ನು ಆಳ ಕಡಿಮೆ ಇರುವ ಅಥವಾ ಹಿಂತಿರುಗುವಾಗ ಆಳ ಜಾಸ್ತಿ ಇರುವ ಪ್ರದೇಶಗಳಿಗೆ ಕೊಂಡೊಯ್ಯುವ ಕಾರ್ಯವನ್ನು ಟಗ್ ಬೋಟ್‌ಗಳು ಮಾಡುತ್ತವೆ.

ಇವಿಷ್ಟೇ ಅಲ್ಲದೆ ಸಮುದ್ರ ಮಧ್ಯದಲ್ಲಿ ಹಡಗುಗಳು ಕೆಟ್ಟು ನಿಂತರೆ ಅಂತಹ ಹಡಗುಗಳನ್ನು ಬಂದರಿಗೆ ಎಳೆದುತರುವ ಕಾರ್ಯವನ್ನು ಈ ಟಗ್ ಬೋಟ್‌ಗಳು ಮಾಡುತ್ತವೆ. ಇಂತಹ ಟಗ್‌ಬೋಟ್ ಒಂದು ಕಾರವಾರ ಬಂದರಿನಲ್ಲಿ ಮುಳುಗಡೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement