ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ದೂರವಾಣಿ ಕದ್ದಾಲಿಕೆ ಕುರಿತು ಡಿವಿಎಸ್ ಕುಟುಂಬ ಅಸಮಾಧಾನ

ಕಾರ್ತಿಕ್ ಗೌಡ ವಿವಾ(ದ)ಹ ಪ್ರಕರಣ...

Srinivasa Murthy VN
Updated On : 10 Oct 2014, 9:20 am

ದೂರವಾಣಿ ಕದ್ದಾಲಿಕೆಗೆ ಆದೇಶ ನೀಡಿದ್ದ ನಗರ ಪೊಲೀಸ್ ಆಯುಕ್ತ

ಬೆಂಗಳೂರು:
ಕಾರ್ತಿಕ್ ಗೌಡ ವಿವಾ(ದ)ಹ ಪ್ರಕರಣ ಸಂಬಂಧ ನಗರ ಪೊಲೀಸರು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರ ಕುಟುಂಬಸ್ಥರ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿದ್ದು, ಪೊಲೀಸರ ಕ್ರಮದ ವಿರುದ್ಧ ಡಿವಿ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಮತ್ತು ನಟಿ ಮೈತ್ರಿಯಾ ಗೌಡ ಅವರ ವಿವಾ(ದ)ಹ ಪ್ರಕರಣ ಸಂಬಂಧ ಸದಾನಂದಗೌಡ ಅವರ ಕುಟುಂಬದ ಐದು ಮಂದಿಯ ದೂರವಾಣಿ ಸಂಭಾಷಣೆಯನ್ನು ದಾಖಲಿಸಿಕೊಳ್ಳುವಂತೆ ಆರ್‌ಟಿ ನಗರ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಸೂಚಿಸಿರುವುದು ಈದೀಗ ವಿವಾದಕ್ಕೆ ಕಾರಣವಾಗಿದೆ.

ಪೊಲೀಸರ ಕ್ರಮವನ್ನು ಸದಾನಂದ ಗೌಡ ಅವರ ಆಪ್ತರು ಟೀಕಿಸಿದ್ದು, 'ಸದಾನಂದಗೌಡ ಅವರ ರಾಜಕೀಯ ಏಳಿಗೆಯನ್ನು ಸಹಿಸದ ಮಂದಿ ದುರುದ್ದೇಶಪೂರ್ವಕವಾಗಿ ದೂರು ಸಲ್ಲಿಸಿದ್ದು, ಡಿವಿಎಸ್ ಕುಟುಂಬದ ಯಾವುದೇ ಸದಸ್ಯರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಅಥವಾ ಭಯೋತ್ಪಾದನೆಯಲ್ಲಿ ಭಾಗಿಯಾಗಿಲ್ಲ' ಎಂದು ಸದಾನಂದಗೌಡ ಅವರ ಆಪ್ತ ತಮ್ಮೇಗೌಡ ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ ಕಾರ್ತಿಕ್ ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಆರ್.ಟಿ ನಗರ ಪೊಲೀಸರು ಸುಮಾರು 7 ದಿನಗಳ ಕಾಲ ಡಿವಿಎಸ್ ಕುಟುಂಬದ ಐದು ಮಂದಿಯ ದೂರವಾಣಿಗಳನ್ನು ಕದ್ದಾಲಿಕೆ ಮಾಡಿದ್ದು, ಸೆಪ್ಟೆಂಬರ್ 5ರಿಂದ 11ರವರೆಗಿನ ಎಲ್ಲ ಕರೆಗಳನ್ನು ಕದ್ದಾಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಡಿವಿಎಸ್ ಪತ್ನಿ ಡಾಟಿ ಅವರ ಸಂಬಂಧಿ ಗೌತಮ್, ಸದಾನಂದಗೌಡ ಅವರ ಆಪ್ತ ಸಹಾಯಕ ತಮ್ಮೇಗೌಡ, ಕಾರ್ತಿಕ್ ಗೌಡ ಅವರ ಸೋದರ ಸಂಬಂಧಿ ಮುರಳಿ ಮತ್ತು ಸದಾನಂದಗೌಡ ಅವರ ಸೋದರ ಭಾಸ್ಕರ್ ಗೌಡ, ಉದ್ಯಮಿ ಅಶೋಕ್ ಪೈ ಸೇರಿದಂತೆ ಒಟ್ಟು 5 ಮಂದಿಯ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಗೃಹ ಇಲಾಖೆಯ ಮಧ್ಯಪ್ರವೇಶ
ಕದ್ದಾಲಿಕೆ ಪ್ರಕರಣ ಸಂಬಂಧ ಗೃಹ ಇಲಾಖೆ ಮಧ್ಯ ಪ್ರವೇಶ ಮಾಡಿದ್ದು, ದೂರವಾಣಿ ಕದ್ದಾಲಿಕೆ ಮಾಡದಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ರವಾನಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ದೂರವಾಣಿ ಕದ್ದಾಲಿಕೆ ಪ್ರಕ್ರಿಯೆಯನ್ನು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರತೀಯ ದೂರವಾಣಿ ಕಾಯ್ದೆಯ ಅನ್ವಯ ದೂರವಾಣಿ ಕದ್ದಾಲಿಕೆ ಮಾಡಲು ಪೊಲೀಸರಿಗೆ ಅಧಿಕಾರವಿದ್ದು, 7 ದಿನಗಳವರೆಗೆ ಮಾತ್ರ ಅವರು ಗೃಹ ಇಲಾಖೆಯ ಅನುಮತಿ ಇಲ್ಲದೇ ದೂರವಾಣಿಗಳನ್ನು ಕದ್ದಾಲಿಸಬಹುದು. ಆದರೆ 7 ದಿನಗಳ ಬಳಿಕವೂ ಕದ್ದಾಲಿಕೆಯನ್ನು ಮುಂದುವರೆಸಬೇಕಿದ್ದರೆ ಗೃಹ ಇಲಾಖೆಯ ಅನುಮತಿ ಕಡ್ಡಾಯವಾಗಿದೆ.

ಪ್ರತಿಕ್ರಿಯೆ ನೀಡಲ್ಲ: ಡಿವಿ ಸದಾನಂದಗೌಡ
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಮಗನ ಮೇಲೆ ಆರೋಪವಿದ್ದು, ಹೀಗಾಗಿ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಕೇಂದ್ರ ರೇಲ್ವೇ ಸಚಿವ ಸದಾನಂದಗೌಡ ಅವರು ಹೇಳಿದ್ದಾರೆ.

ಕದ್ದಾಲಿಕೆ ಮಾಡಿದ್ದು ನಿಜ: ಎಂ.ಎನ್.ರೆಡ್ಡಿ
ಪ್ರಕರಣ ಸಂಬಂಧ ಕಾರ್ತಿಕ್ ಗೌಡ ವಿಚಾರಣೆಗೆ ಸಹಕರಿಸದ ಹಿನ್ನಲೆಯಲ್ಲಿ ದೂರವಾಣಿ ಕದ್ದಾಲಿಕೆ ಅನಿವಾರ್ಯವಾಗಿತ್ತು. ಹೀಗಾಗಿ ವಿಚಾರಣೆಯ ಆರಂಭದಲ್ಲಿ ದೂರವಾಣಿ ಕದ್ದಾಲಿಕೆ ಮಾಡಿದ್ದೆವು. ಆದರೆ ಈಗ ಆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳಿಂದ ಟೀಕಾ ಪ್ರಹಾರ: ವಿಚಾರ ತಿಳಿದೇ ಇಲ್ಲ ಎಂದ ಸಿಎಂ ಸಿದ್ದು
ಇನ್ನು ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ತಮ್ಮ ಅಸ್ತ್ರವಾಗಿ ಬಳಸಿಕೊಂಡಿರುವ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಟೀಕಾ ಪ್ರಹಾರವನ್ನೇ ಹರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ನೈತಿಕ ಹೊಣೆ ಹೊರಬೇಕು ಎಂದು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಇದೇ ಅಂಶವನ್ನು ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷ ಕೂಡ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಟೀಕಿಸಿವೆ.

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಕದ್ದಾಲಿಕೆ ಬಗ್ಗೆ ತಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement