ಕೆಎಫ್‌ಸಿಎಸ್‌ಸಿ ಅಧಿಕಾರಿಗಳ ಮನೆ ಮೇಲೆ 'ಲೋಕಾ' ದಾಳಿ
ರೈತರ ಭತ್ತ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ನಿಗಮದ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು..
ಶಿವಮೊಗ್ಗ: ರೈತರ ಭತ್ತ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ನಿಗಮದ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆಗೊಳಪಡಿಸುತ್ತಿದ್ದಾರೆ.
ಶಿವಮೊಗ್ಗದ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. 2011-12ನೇ ಸಾಲಿನ ರೈತರ ಬೆಂಬಲ ಭತ್ತ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಸರ್ಕಾರಿ ಗೋದಾಮಿನಲ್ಲಿದ್ದ ಸುಮಾರು 1 ಸಾವಿರ ಟನ್ ಭತ್ತ ನಾಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಕೆಎಫ್‌ಸಿಎಸ್‌ಸಿ (ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ) ಅಧಿಕಾರಿಗಳಾದ ರಾಮಚಂದ್ರ ರಾಮೋಜಿ, ನಾಗರಾಜ ಮತ್ತು ಲಿಂಗಯ್ಯ ಅವರ ವಿರುದ್ಧ ಅಕ್ರಮ ನಡೆಸಿದ ಆರೋಪಗಳು ಕೇಳಿಬಂದಿದ್ದವು.
ಸುಮಾರು 12.5 ಕೋಟಿಯಷ್ಟು ಬೃಹತ್ ಮೊತ್ತದ ಈ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ರಾಮಚಂದ್ರ ರಾಮೋಜಿ, ನಾಗರಾಜ ಮತ್ತು ಲಿಂಗಯ್ಯ ಅವರ ಶಿವಮೊಗ್ಗದ ಮನೆಗಳ ಮೇಲೆ ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿಯೂ ದಾಳಿ
ಇದೇ ವೇಳೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಎಫ್‌ಸಿಎಸ್‌ಸಿ ಅಧಿಕಾರಿ ನರಸಿಂಹ ಮೂರ್ತಿ ಅವರ ಧಾರವಾಡ ನಿವಾಸದ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.