ಅಂದು ಮೆಚ್ಚುಗೆ, ಇಂದು ಅಮಾನತು!
ಹಿರಿಯ ಅಧಿಕಾರಿಗಳು, ನಾಗರೀಕರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿ.ಡಿ.ನಾಗರಾಜ್
ಹಿರಿಯ ಅಧಿಕಾರಿಗಳು, ನಾಗರೀಕರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿ.ಡಿ.ನಾಗರಾಜ್
ವಿಶೇಷ ವರದಿ
ಬೆಂಗಳೂರು: ಕ್ಯಾಬ್ ಚಾಲಕನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಮಾನತು ಪ್ರಕರಣ ಎದುರಿಸುತ್ತಿರುವ ಕೆಂಪೇಗೌಡ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಸಿ.ಡಿ.ನಾಗರಾಜ್ ಅವರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೇ ಮೆಚ್ಚುಗೆ ಸೂಚಿಸಿದ್ದರು.
ಕೆಂಪೇಗೌಡ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಬಳಿಕ ರೌಡಿಗಳು, ಸಮಾಜ ಘಾತುಕ ಶಕ್ತಿಗಳ ಪಾಲಿಗೆ ದುಃಸ್ವಪ್ನವಾಗಿದ್ದ ಇನ್ಸ್‌ಪೆಕ್ಟರ್ ಸಿ.ಡಿ.ನಾಗರಾಜ್, ಖಡಕ್ ಅಧಿಕಾರಿಯಾಗಿದ್ದರು. ರೌಡಿಗಳ ಉಪಟಳ ನಲುಗಿದ್ದ ಕೆಂಪೇಗೌಡ ಠಾಣೆ ವ್ಯಾಪ್ತಿಯ ನಾಗರೀಕರು ಅವರ ಕತ್ಯವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. ಠಾಣೆಗೆ ದಿಢೀರ್ ಭೇಟಿ ನೀಡುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ಠಾಣಾಧಿಕಾರಿ ಕರ್ತವ್ಯ ನಿರ್ವಹಣೆ, ದಾಖಲೆಗಳ ನಿರ್ವಹಣೆ, ಪ್ರಕರಣಗಳ ವಿಲೇವಾರಿ, ಗಸ್ತು ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಮೆಚ್ಚುಗೆ ಸೂಚಿಸಿ ಡೈರಿಯಲ್ಲಿ ಪುಟಗಟ್ಟಲೆ ಬರೆದು ಹೋಗುತ್ತಿದ್ದರು.
ಠಾಣೆ ವ್ಯಾಪ್ತಿಯಲ್ಲಿರುವ ಎಲ್ಲಾ ರೌಡಿಗಳನ್ನು ತಿಂಗಳ ಆರಂಭದಲ್ಲಿ ಠಾಣೆಗೆ ಕರೆಸಿ ಅವರು ಎಲ್ಲಿ ವಾಸಿಸುತ್ತಿದ್ದಾರೆ? ಮಾಡುತ್ತಿರುವ ಕೆಲಸವೇನು? ಮತ್ತೆ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸುತ್ತಿದ್ದರಾ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಅವರೆಲ್ಲರಿಂದ ಸಹಿ ಮಾಡಿಸಿಕೊಂಡು ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡುತ್ತಿದ್ದರು. ಹೀಗೆ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಸಿ.ಡಿ.ನಾಗರಾಜ್ ಮಾಡಿದ್ದರು. ಆದರೆ ಅವರನ್ನು ಅಮಾನತುಗೊಳಿಸುವ ವೇಳೆ ನಾಗರಾಜ್ ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಲೆಕ್ಕಕ್ಕೆ ಬಾರದೆ ಇರುವುದು ಆಶ್ಚರ್ಯ ಮೂಡಿಸಿದೆ.
ಎಸಿಪಿಯೊಂದಿಗೆ ಮುಸುಕಿನ ಗುದ್ದಾಟ: ಹಿರಿಯ ಅಧಿಕಾರಿಗಳಿಂದ ಸಿ.ಡಿ.ನಾಗರಾಜ್ ಅವರಿಗೆ ಬರುತ್ತಿದ್ದ ಮೆಚ್ಚುಗೆ ಮಾತುಗಳೇ ಅವರಿಗೆ ಮುಳುವಾಗಲು ಆರಂಭಿಸಿದ್ದವು. ಅಲ್ಲದೇ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕೆಲವು ಚಟುವಟಿಕೆಗಳಿಂದ ಹಣ ಸಂಪಾದಿಸುತ್ತಿದ್ದವರಿಗೆ ಪೆಟ್ಟು ಬಿದ್ದಿತ್ತು. ಹೀಗಾಗಿ, ಇನ್ಸ್‌ಪೆಕ್ಚರ್ ನಾಗರಾಜ್ ಅವರನ್ನು ಮಟ್ಟ ಹಾಕುವಂತೆ ಸಾಕಷ್ಟು ಜನ ಎಸಿಪಿಗೆ ಒತ್ತಡ ಹಾಕುತ್ತಿದ್ದರು.
ಈ ನಡುವೆ ಕ್ಯಾಬ್ ಚಾಲಕನ ಆತ್ಮಹತ್ಯೆ ಘಟನೆ ಹಾಗೂ ನಂತರದ ಬೆಳವಣಿಗೆಗಳು ಸಿ.ಡಿ.ನಾಗರಾಜ್ ಅವರನ್ನು ತುಳಿಯಲು ಅವಕಾಶ ನೀಡಿದವು, ಹೇಗಾದರೂ ಮಾಡಿ ಇನ್ಸ್‌ಪೆಕ್ಟರ್ ನಾಗರಾಜ್ ಅವರನ್ನು ಹಣಿಯಲೇ ಬೇಕು ಎಂದು ಕಾಯುತ್ತಿದ್ದವರಿಗೂ ಲಕ್ಷ್ಮೀಪುರ ನಿವಾಸಿ, ಕ್ಯಾಬ್ ಚಾಲಕ ಪ್ರದೀಪ್ ಆತ್ಮಹತ್ಯೆ ಪ್ರಕರಣ ಕುಮ್ಮಕ್ಕು ನೀಡಿತ್ತು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸ್ ಆಯುಕ್ತರು ಆದೇಶ ನೀಡುತ್ತಿದ್ದಂತೆ ಡಿಸಿಪಿ ರೋಹಿಣಿ ಕಟೋಚ್ ಅವರು, ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಕುಟುಂಬ ಸದಸ್ಯರು, ಸ್ನೇಹಿತರ ಹೇಳಿಕೆಗಳನ್ನು ಪಡೆದುಕೊಂಡಿದ್ದರು. ಆದರೆ ಇನ್ಸ್‌ಪೆಕ್ಟರ್ ನಾಗರಾಜ್ ಅವರ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡಿರಲೇ ಇಲ್ಲ. ಎಲ್ಲದಕ್ಕೂ ಇನ್ಸ್‌ಪೆಕ್ಟರ್ ಹಾಗೂ ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಕಾನ್ಸ್‌ಟೇಬಲ್‌ಗಳು ಮಾತ್ರ ಕಾರಣ ಎಂದು ಒಂದೇ ದಿನದಲ್ಲಿ ಪ್ರಕರಣದ ತನಿಖೆ ಪೂರ್ಣಗೊಳಿಸಿ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ 60 ಪುಟಗಳ ವರದಿ ನೀಡಿದ್ದರು.
ಸತ್ಯ ಬಯಲಾಗುತ್ತಿದೆ: ಎಲ್ಲ ಮುಗಿದ ಬಳಿಕ ಈಗ ನಾಗರಾಜ್ ಅವರ ಬಗೆಗಿನ ಹಿರಿಯ ಅಧಿಕಾರಿಗಳ ಧೋರಣೆ ಬದಲಾಗಿದೆ. ಅಂದು ನಡೆದ ಘಟನೆಗಳು, ಗಲಭೆಗೆ ಕಾರಣವಾದ ಅಂಶಗಳು ಎನ್ನುವುದನ್ನು ಅರಿತಿರುವ ಅಧಿಕಾರಿಗಳು ನಾಗರಾಜ್ ಅವರ ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸುತ್ತಿದ್ದಾರೆ.