ಜಯಾ ವರ್ಗಾವಣೆಗೆ ಆಕ್ಷೇಪವಿಲ್ಲ: ಜಾರ್ಜ್
ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ನಮ್ಮ ಜೈಲಿನಿಂದ ವರ್ಗಾಯಿಸುವುದಕ್ಕೆ ರಾಜ್ಯ ಸರ್ಕಾರದ ವಿರೋಧವಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಕಾರಾಗೃಹ ಮ್ಯಾನ್ಯುವಲ್ ಪ್ರಕಾರ ಅಂತಾರಾಜ್ಯ ಕೈದಿಗಳನ್ನು ಸ್ಥಳಾಂತರಿಸುವಾಗ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕು. ಆದರೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಿಯಮ ಪ್ರಕಾರ ಹೀಗಿಲ್ಲ. ಉಭಯ ರಾಜ್ಯಗಳು ಒಪ್ಪಿದರೆ ವರ್ಗಾವಣೆ ಮಾಡಬಹುದು. ಈ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ನಾವು ನಿರಾಕ್ಷೇಪಣಾ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಜಯಲಲಿತಾ ಪ್ರಕರಣ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಹೀಗಾಗಿ ನಾವು ನೇರವಾಗಿ ಅರ್ಜಿ ಸಲ್ಲಿಸುವುದಕ್ಕೆ ಸಾಧ್ಯವಿಲ್ಲ. ತಮಿಳುನಾಡು ಸರ್ಕಾರ ಬೇಕಾದರೆ ಅರ್ಜಿ ಸಲ್ಲಿಸಲಿ ಎಂದರು. ಜಯಲಲಿತಾ ಅರೋಗ್ಯ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಅಗತ್ಯ ಬಿದ್ದರೆ ಅವರನ್ನು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗೆ ದಾಖಲಿಸಲಾಗುವುದು. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೈದಿಗಳ ಬಿಡುಗಡೆ: ಕೈದಿಗಳ ಅವಧಿ ಪೂರ್ವ ಬಿಡುಗಡೆಗೆ ರಾಜ್ಯ ಸರ್ಕಾರ ಸಂಪುಟ ಸಭೆಯ ಒಪ್ಪಿಗೆ ಪಡೆದಿದೆ. ಆದರೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ಇತ್ಯರ್ಥವಾಗದೇ ನಾವು ಪ್ರಕ್ರಿಯೆ ಆರಂಭಿಸುವುದಕ್ಕೆ ಸಾಧ್ಯವಿಲ್ಲ. 260 ಮಂದಿಯನ್ನು ಬಿಡುಗಡೆ ಮಾಡುವುದಕ್ಕೆ ಆರಂಭಿಕ ಹಂತದಲ್ಲಿ ಒಪ್ಪಿಗೆ ನೀಡಲಾಗಿದೆ. ಅದೇ ರೀತಿ ನಕ್ಸಲ್ ಶರಣಾಗತಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಈಗಾಗಲೇ ಪ್ರಕಟಪಡಿಸಿದೆ. ಕಾನೂನು ಚೌಕಟ್ಟಿನಲ್ಲೇ ಕ್ರಮ ತೆಗೆದುಕೊಂಡಿದ್ದೇವೆ. ಮನಪರಿವರ್ತನೆಗೊಂಡು ಶರಣಾದವರಿಗೆ ಮುಖ್ಯ ವಾಹಿನಿಗೆ ಬರಲು ಅವಕಾಶವಿದೆ ಎಂದರು.
ವೇಶ್ಯಾವಾಟಿಕೆ ಕಾನೂನುಬದ್ಧ ವಿಚಾರದಲ್ಲಿ ನಾನು ವೈಯುಕ್ತಿಕ ಅಭಿಪ್ರಾಯ ಹೊಂದಿಲ್ಲ. ಸಾರ್ವಜನಿಕರು, ಜನಪ್ರತಿಗಳು ಒಟ್ಟಾಗಿ ಈ ಬಗ್ಗೆ ನಿಲುವು ತೆಗೆದುಕೊಳ್ಳಬೇಕೇ ಹೊರತು ತರಾತುರಿಯ ನಿರ್ಧಾರ ಸಲ್ಲದು ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯವರಿಗೆ ಸಿಎಂ ಸಿಂಹಸ್ವಪ್ನ
ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಹಸ್ವಪ್ನರಾಗಿದ್ದಾರೆ. ಹೀಗಾಗಿ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಸಿದ್ದರಾಮಯ್ಯನವರ ರಾಜಿನಾಮೆಗೆ ಪದೇ ಪದೇ ಒತ್ತಾಯಿಸುತ್ತಾರೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ವ್ಯಂಗ್ಯವಾಡಿದ್ದಾರೆ. ರೇಲ್ವೆ ಸಚಿವ ಡಿ.ವಿ.ಸದಾನಂದಗೌಡರ ಕುಟುಂಬ ವರ್ಗದ ಫೋನ್ ಟ್ಯಾಪಿಂಗ್ ಪ್ರಕರಣ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸಿರುವ ಹಿನ್ನಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಬಹಳ ದಕ್ಷರು ಮತ್ತು ಬುದ್ಧಿಮಂತರು. ಇದರಿಂದ ಬಿಜೆಪಿಯವರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸಣ್ಣಪುಟ್ಟ ವಿಚಾರಕ್ಕೂ ರಾಜಿನಾಮೆ ಕೇಳುತ್ತಾರೆ. ಫೋನ್ ಟ್ಯಾಪಿಂಗ್ ವಿಚಾರ ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲೀ ಗೊತ್ತಿಲ್ಲ. ನಗರ ಪೊಲೀಸ್ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಂಡಿದ್ದಾರೆ.