'ಜಯಾ' ಬಿಡುಗಡೆ ನಾಳೆಗೆ ಮುಂದೂಡಿಕೆ
ಅಕ್ರಮ ಆಸ್ತಿ ಗಳಿಗೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಬಿಡುಗಡೆ ಶನಿವಾರಕ್ಕೆ ಮುಂದೂಡಲಾಗಿದೆ.
ಬೆಂಗಳೂರು: ಅಕ್ರಮ ಆಸ್ತಿ ಗಳಿಗೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಬಿಡುಗಡೆ ಶನಿವಾರಕ್ಕೆ ಮುಂದೂಡಲಾಗಿದೆ.
ಇಂದು ಸರ್ವೋಚ್ಛ ನ್ಯಾಯಾಲಯದಿಂದ ಜಯಲಲಿತಾ ಅವರಿಗೆ ಷರತ್ತುಬದ್ಧ ಜಾಮೀನು ದೊರೆತಿದೆಯಾದರೂ, ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೆ ಜಾಮೀನು ಆದೇಶದ ಪ್ರತಿ ತಲುಪಿಲ್ಲ. ಹೀಗಾಗಿ ಜಯಲಲಿತಾ ಅವರ ಬಿಡುಗಡೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ ಮಧ್ಯಾಹ್ನ ಸುಮಾರು 1 ಗಂಟೆಯಿಂದ 2 ಗಂಟೆಯ ಸುಮಾರಿಗೆ ಜಯಲಲಿತಾ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನವೇ ಸುಪ್ರೀಂ ಕೋರ್ಟ್ ಜಯಲಲಿತಾ ಅವರಿಗೆ ಜಾಮೀನು ನೀಡಿದ್ದು, ಅದರ ಕುರಿತ ಆದೇಶ ಬರೆಸುವ ಪ್ರಕ್ರಿಯೆ ಸಂಜೆಯವರೆವಿಗೂ ಮುಂದುವರೆಯಿತು. ಹೀಗಾಗಿ ಜಾಮೀನು ಆದೇಶದ ಪ್ರತಿಯನ್ನು ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೆ ರವಾನಿಸುವುದು ವಿಳಂಬವಾಯಿತು. ನಾಳೆ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯ ಜಯಲಲಿತಾ ಅವರ ಜಾಮೀನು ಆದೇಶದ ಪ್ರತಿಯನ್ನು ಫ್ಯಾಕ್ಸ್ ಮೂಲಕ ರವಾನಿಸಲಿದೆ. ಬಳಿಕ ಪರಪ್ಪನ ಅಗ್ರಹಾರದ ರಿಜಿಸ್ಟ್ರಾರ್ ಅವರಿಂದ ಜಯಾ ಪರ ವಕೀಲರು ವಿಶೇಷ ಅನುಮತಿ ಪಡೆದು ಅವರನ್ನು ಬಿಡುಗಡೆ ಮಾಡಿಸಿಕೊಳ್ಳಲ್ಲಿದ್ದಾರೆ.
ಬೆಂಗಳೂರಿನಲ್ಲಿ ಬಿಗಿ ಭದ್ರತೆ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿರುವ ಹಿನ್ನಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರಿಗೆ ಭದ್ರತೆಯ ನೇತೃತ್ವ ವಹಿಸಲಾಗಿದೆ. ಇವರ ಅಧೀನದಲ್ಲಿ ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 5 ಡಿಸಿಪಿ, ಇನ್ಸ್‌ಪೆಕ್ಟರ್‌ಗಳು, ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಸುಮಾರು 5 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಅಲ್ಲದೆ ಭದ್ರತಾ ದೃಷ್ಟಿಯಿಂದ ಪರಪ್ಪನ ಅಗ್ರಹಾರದ ಆವರಣದ 5 ಕಿ.ಮೀ. ಸುತ್ತಮುತ್ತ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ನಾಳೆ ಬೆಳಗ್ಗೆ 7ಗಂಟೆಯಿಂದಲೇ ವಿಶೇಷ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಕೇವಲ ತಮಿಳುನಾಡಿನ ಶಾಸಕ ಮತ್ತು ಸಚಿವರಿಗೆ ಮಾತ್ರ ಪರಪ್ಪನ ಅಗ್ರಹಾರದ ಆವರಣದಲ್ಲಿ ಪ್ರವೇಶವಿದ್ದು, ಬೆಂಬಲಿಗರಾಗಲಿ ಅಥವಾ ಸಂಬಂಧಿಕರಾಗಲಿ ಆವರಣ ಪ್ರವೇಶಿಸುವಂತಿಲ್ಲ.
ತಮಿಳುನಾಡು ನೋಂದಾವಣಿಯ ವಾಹನಗಳಿಗೆ ಪ್ರವೇಶವಿಲ್ಲ
ಇನ್ನು ರಾಜ್ಯಕ್ಕೆ ಪ್ರವೇಶಿಸುವ ತಮಿಳುನಾಡು ರಾಜ್ಯದ ನೋಂದಾವಣಿಯ ವಾಹನಗಳಿಗೆ ರಾಜ್ಯದಲ್ಲಿ ಪ್ರವೇಶ ನಿರಾಕರಿಸಲಾಗಿದ್ದು, ಇದಕ್ಕಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೊಸರೋಡ್ ಮಾರ್ಗದಲ್ಲಿ ಒಟ್ಟು 4 ಚೆಕ್‌ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಇಂದು ಸಂಜೆಯಿಂದಲೇ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ.
ವಿಶೇಷ ವಿಮಾನದಲ್ಲಿ ಜಯಾ ತಮಿಳುನಾಡಿಗೆ ವಾಪಸ್
ಸುಪ್ರೀಂ ಕೋರ್ಟ್‌ನಲ್ಲಿ ಷರತ್ತು ಬದ್ಧ ಜಾಮೀನು ಪಡೆದಿರುವ ಜಯಲಲಿತಾ ಅವರು, ನಾಳೆ ವಿಶೇಷ ವಿಮಾನದ ಮೂಲಕ ಚೆನ್ನೈಗೆ ತೆರಳಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಜಯಲಲಿತಾ ಅವರು ಝಡ್ ಪ್ಲಸ್ ಭದ್ರತೆಯಲ್ಲಿ ಖಾಸಗಿ ವಾಹನದಲ್ಲಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ತಮಿಳುನಾಡಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಜಯಲಲಿತಾ ಅವರನ್ನು ಸ್ವಾಗತಿಸಲು ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಸೇರಿದಂತೆ ಸಚಿವರು ಮತ್ತು ಶಾಸಕರು ಈಗಾಗಲೇ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದಾರೆ.
ಒಟ್ಟಾರೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಕಳೆದ 21 ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದ, ಜಯಲಲಿತಾ ಅವರು ನಾಳೆ ಸಂಜೆಯೊಳಗೆ ಬಿಡುಗಡೆಯಾಗಲಿದ್ದಾರೆ.