ವಿವಾದಕ್ಕೀಡಾದ 'ಸ್ಯಾಂಕಿ' ತೆಪ್ಪೋತ್ಸವ
ಸ್ಯಾಂಕಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲು ಮುಂದಾಗಿದ್ದ ಲಕ್ಷ್ಮೀನಾರಾಯಣ ದೇಗುಲ ಸಮಿತಿಯ ನಿರ್ಧಾರಕ್ಕೆ ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸ್ಯಾಂಕಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲು ಮುಂದಾಗಿದ್ದ ಲಕ್ಷ್ಮೀನಾರಾಯಣ ಸ್ವಾಮಿ ದೇಗುಲ ಸಮಿತಿಯ ನಿರ್ಧಾರಕ್ಕೆ ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಸ್ಯಾಂಕಿ ಟ್ಯಾಂಕ್ ಕೆರೆಯಲ್ಲಿ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಆಯೋಜಿಸಿರುವ ತೆಪ್ಪೋತ್ಸವ ಕಾರ್ಯಕ್ರಮ ವಿವಾದಕ್ಕೀಡಾಗಿದ್ದು, ಪರಿಸರ ಪ್ರಿಯರು ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಆಯೋಜಿಸಿರುವ ಕಾರ್ಯಕ್ರಮದಿಂದಾಗಿ ಕೆರೆ ಆವರಣದಲ್ಲಿ ಜೀವಿಸುತ್ತಿರುವ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ಅಪಾಯ ಎದುರಾಗಲಿದ್ದು, ತೆಪ್ಪೋತ್ಸವ ನಡೆಸಬಾರದು ಎಂದು ಪರಿಸರ ವಾದಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಈಗಾಗಲೇ ಬಿಬಿಎಂಪಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿರುವ ಪರಿಸರವಾದಿಗಳು, ಬಿಬಿಎಂಪಿ ಆಯುಕ್ತ ಮತ್ತು ವಿಶೇಷ ಜಂಟಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ತೆಪ್ಪೋತ್ಸವಕ್ಕೆ ಅನುಮತಿ ನೀಡಿದ್ದ ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರನ್ನು ಕೂಡ ಪರಿಸರವಾದಿಗಳು ಭೇಟಿ ಮಾಡಿದ್ದು, ಅನುಮತಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಸ್ಯಾಂಕಿ ಕೆರೆಯ ಆವರಣದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ನಿಶಾಚರ ಪ್ರಾಣಿ ಮತ್ತು 150ಕ್ಕೂ ಅಧಿಕ ಪಕ್ಷಿ ಪ್ರಬೇದಗಳು ಜೀವಿಸುತ್ತಿದ್ದು, ತೆಪ್ಪೋತ್ಸವದಿಂದಾಗಿ ಅವುಗಳಿಗೆ ತೊಂದರೆಯಾಗಲಿದೆ. ಕಾರ್ಯಕ್ರಮದಲ್ಲಿ ಬಳಸಲಾಗುವ ಹೈ ವೋಲ್ಟೇಜ್ ಸ್ಪೀಕರ್ ಗಳಿಂದಾಗಿ ಅವುಗಳ ಹೃದಯಕ್ಕೆ ತೊಂದರೆಯಾಗುತ್ತದೆ. ಅಂತೆಯೇ ಹೆಚ್ಚು ಪ್ರಖರವಾದ ದೀಪಗಳಿಂದಾಗಿ ಅವುಗಳ ಕಣ್ಣುಗಳಿಗೆ ಹಾನಿಯಾಗಲಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮದ ಸಮಯದ ಕುರಿತಾಗಿಯೂ ಕೂಡ ಪರಿಸರವಾದಿಗಳು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಜೆಯ ಹೊತ್ತಿನಲ್ಲಿ ನೂರಾರು ಪ್ರಭೇದದ ಪಕ್ಷಿಗಳು ಸ್ಯಾಂಕಿ ಆವಲರಣಕ್ಕೆ ಬರುತ್ತವೆ. ಈ ಹೊತ್ತಿನಲ್ಲಿ ತೆಪ್ಪೋತ್ಸವ ಕಾರ್ಯಕ್ರಮ ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.
ಬೆಂಗಳೂರಿಗರ ನೆಚ್ಚಿನ ತಾಣವಾಗಿರುವ ಸ್ಯಾಂಕಿ ಕೆರೆ ಆವರಣದಲ್ಲಿ ಸಂಜೆಯಾಗುತ್ತಲೇ ನೂರಾರು ಮಂದಿ ಆಗಮಿಸಿ ಕೊಂಚ ವಿಶ್ರಾಂತಿ ಪಡೆಯುತ್ತಾರೆ. ಕೆರೆ ಆವರಣದಲ್ಲಿ ಹಾರಿ ಬರುವ ಪಕ್ಷಿಗಳಿಗೆ ತಮ್ಮ ಬಳಿ ಇರುವ ಧಾನ್ಯಗಳನ್ನು ನೀಡಿ ಸಂತೋಷಪಡುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಳ್ಳ ಬಯಸಿದ್ದ ಖಾಸಗಿ ಸಂಸ್ಥೆಯೊಂದು ಈ ಹಿಂದೆ ಟಗ್ ಫೆಸ್ಟ್ ಎಂಬ ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಗ ಇದೇ ಪರಿಸರವಾದಿಗಳು ಮಧ್ಯೆ ಬಂದು ಆ ಕಾರ್ಯಕ್ರಮ ರದ್ದಾಗುವಂತೆ ಮಾಡಿದ್ದರು.
ಇದೀಗ ಇಂತಹುದೇ ಕಾರ್ಯಕ್ರಮವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಲಕ್ಷ್ಮೀನಾರಾಯಣ ಸ್ವಾಮಿ ದೇಗುಲದ ಟ್ರಸ್ಟ್ ಆಯೋಜಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ತೆಪ್ಪೋತ್ಸವ ಕಾರ್ಯಕ್ರಮವೇನೂ ಪರಂಪರಾಗತ ಕಾರ್ಯಕ್ರಮವಲ್ಲ. ಇದೇ ಮೊದಲ ಬಾರಿಗೆ ದೇವಾಲಯದ ಆಡಳಿತ ಮಂಡಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈಗಾಗಲೇ ಈ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೀಗಾಗಿ ಪ್ರಸ್ತುತ ಪರಿಸರವಾದಿಗಳ ವಿರೋಧ ದೇವಾಲಯದ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೂಲಗಳ ಪ್ರಕಾರ ಅಧಿಕಾರಿಗಳನ್ನು ಭೇಟಿ ಮಾಡಿದ್ದ ಪರಿಸರವಾದಿಗಳಿಗೆ ಬಿಬಿಎಂಪಿ ಆಯುಕ್ತರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಕಾರ್ಯಕ್ರಮವನ್ನು ರದ್ದು ಮಾಡುವ ಕುರಿತು ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.